ಲಂಡನ್, ಜು 13 (DaijiworldNews/MS): ದೇಶದಲ್ಲಿ ಹೇರಲಾಗಿರುವ ಕೋವಿಡ್ ನಿರ್ಬಂಧಗಳು ಜುಲೈ 19ಕ್ಕೆ ಅಂತ್ಯವಾಗಲಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ಹೇಳಿದ್ದಾರೆ.
ಇದಲ್ಲದೆ ಸಾಮಾಜಿಕ ಸಂಪರ್ಕದ ಮೇಲಿನ ಎಲ್ಲಾ ಕಾನೂನು ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವ ನಿಯಮ ಮತ್ತು ವರ್ಕ್ ಪ್ರಂ ಹೋಂ ನಂತಹ ಎಲ್ಲಾ ಶಿಫಾರಸುಗಳನ್ನು ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆ. ಆದರೆ "ಈ ಸಾಂಕ್ರಾಮಿಕ ರೋಗವು ಮುಗಿದಿಲ್ಲ" ಎಂದು ಎಚ್ಚರಿಕೆ ನೀಡಿದ ಪ್ರತಿಯೊಬ್ಬರು "ಜವಾಬ್ದಾರಿಯುತ ಹಾಗೂ ಎಚ್ಚರಿಕೆಯಿಂದ" ಮುಂದುವರಿಯುವುದು ಅತ್ಯಗತ್ಯ ಎಂದು ಪ್ರಧಾನಿ ಬೋರಿಸ್ ಹೇಳಿದ್ದಾರೆ.
ಕೊರೊನಾವೈರಸ್ ಸೋಂಕು ಹೊಂದಿರುವ ಜನರಲ್ಲಿ ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳದಂತೆ ತಡೆಯಲು ಲಸಿಕೆ ನೆರವಾಗಿದೆ. ವ್ಯಾಕ್ಸಿನೇಷನ್ಗಳು "ರಕ್ಷಣಾತ್ಮಕ ಗೋಡೆ" ಯನ್ನು ರಚಿಸಿವೆ. ಆದರೆ ಮುಂದೆ ಸೋಂಕು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಏರಿಕೆಯಾಗಬಹುದು. ಆದರೂ, ಕಳೆದ ವರ್ಷ ಸಾಂಕ್ರಾಮಿಕ ಉಲ್ಬಣವಾಗಿದ್ದ ಸಮಯಕ್ಕೆ ಹೋಲಿಸಿದರೆ ತೀರಾ ಕೆಳ ಮಟ್ಟದಲ್ಲಿರಲಿವೆ ಎಂದೂ ಬ್ರಿಟನ್ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜುಲೈ 19 ರ ಸೋಮವಾರದಿಂದ ನಿರ್ಬಂಧಗಳು ಕೊನೆಯಾದರೂ ಕೋವಿಡ್ಗಿಂತ ಮೊದಲಿನಂತೆಯೇ ಜೀವನಕ್ಕೆ ಮರಳಲು ಸಾಧ್ಯವಿಲ್ಲ ಎಂದು ಇದೇ ವೇಳೆ ಹೇಳಿದರು.
ಇಂಗ್ಲೆಂಡ್ನಲ್ಲಿ ಕೊರೊನಾವೈರಸ್ನ ʼಡೆಲ್ಟಾʼ ರೂಪಾಂತರಿ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇತ್ತೀಚೆಗೆ ನಿತ್ಯ 30,000 ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.