ನವದೆಹಲಿ, ಜು 14 (DaijiworldNews/PY): ಸುಳ್ಳು ಆರೋಪದ ಮೇಲೆ ಬಂಧಿತರಾಗಿ, ಸಾಕ್ಷ್ಯಾಧಾರಗಳಿಲ್ಲದೇ ಬಿಡುಗಡೆಯಾಗಿದ್ದರೂ ಕೂಡಾ ಸೂಕ್ತ ದಾಖಲೆಗಳಿಲ್ಲದೇ, ಇರಾನ್ನಲ್ಲಿ ಉಳಿದು ಬೀದಿ ಸುತ್ತುತ್ತಿರುವ ಐದು ಮಂದಿ ಯುವಕರು ತಮ್ಮ ನೆರವಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರ
2020ರ ಫೆಬ್ರವರಿ 20ರಂದು, ಬಿಹಾರದ ಸರನ್ನ ಪ್ರಣವ್ ಕುಮಾರ್, ಉತ್ತರಾಖಾಂಡ್ನ ಬಗೇಶ್ವರ್, ಮಹಾರಾಷ್ಟ್ರದ ಮುಂಬೈನ ಅನಿಕೇತ್ ಯೆನ್ಪುರೆ, ಮಂದರ್ ವರ್ಲಿಕರ್, ತಮಿಳುನಾಡಿನ ನಾಗಪಟ್ಟಣಂನ ತಮಿಝೆಸೆಲ್ವನ ರಂಗಸ್ವಾಮಿ ಅವರನ್ನು ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಅವರು ಪ್ರಯಾಣಿಸುತ್ತಿದ್ದ ಹಡಗಿನ ಸಮೇತ ಹೊರ್ಮೋಝ್ನ ಸ್ಟ್ರೈತ್ನಲ್ಲಿ ಬಂಧಿಸಲಾಗಿತ್ತು.
ಇರಾನ್ನ ಚಬಹರ್ ಜೈಲಿನಲ್ಲಿ 403 ದಿನಗಳ ಕಾಲ ಇದ್ದ ಅವರ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆ ಐದು ಮಂದಿಯನ್ನು ಚಬಹರ್ ನ್ಯಾಯಾಲಯ 2021ರ ಮಾರ್ಚ್ 8ರಂದು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಅದರಂತೆ, ಇರಾನ್ ಸರ್ಕಾರ, ಭಾರತೀಯ ಯುವಕರನ್ನು ಬಿಡುಗಡೆ ಮಾಡಿದೆ. ಆದರೆ, ಅವರ ಪಾಸ್ಪೋಟ್ ಸೇರುದಂತೆ ಗುರುತಿನ ಚೀಟಿ ಹಾಗೂ ಮೂಲಭೂತ ದಾಖಲೆಗಳನ್ನು ವಾಪಾಸ್ಸು ನೀಡಿಲ್ಲ. ಜೈಲಿನಿಂದ ಬಿಡುಗಡೆಯಾಗಿದ್ದರೂ ಕೂಡಾ ದೇಶ ಬಿಟ್ಟು ಹೋಗದಂತೆ ಅಲ್ಲಿನ ಪೊಲೀಸರು ಯುವಕರಿಗೆ ಸೂಚಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ತನ್ನ ಅಳಲು ತೋಡಿಕೊಂಡಿರುವ ಅನಿಕೇತ್, "ಯಾವುದೇ ದಾಖಲೆಗಳಿಲ್ಲದೇ ಕೆಲಸ ಮಾಡಲು ಆಗುತ್ತಿಲ್ಲ. ಒಪ್ಪೊತ್ತಿನ ಊಟಕ್ಕೂ ಕೂಡಾ ಪರದಾಡುವ ಸ್ಥಿತಿ ಎದುರಾಗಿದೆ. ನಮ್ಮ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಸರ್ಕಾರದೊಂದಿಗೆ ಮಾತನಾಡಬೇಕು" ಎಂದು ಮನವಿ ಮಾಡಿದ್ದಾರೆ.
"ಕೆಲ ದುಷ್ಟ ಏಜೆಂಟ್ಗಳ ವ್ಯೂಹದಲ್ಲಿ ಸಿಲುಕಿ ಇಲ್ಲಿನ ಸರ್ಕಾರದಿಂದ ನಾವು ಬಂಧನಕ್ಕೊಗಾಗಿದ್ದೇವೆ. ನಾವು ಸಂಪೂರ್ಣ ಅಮಾಯಕರು. ಬಲೂಚಿಸ್ಥಾನದ ಚಬಹರ್ನ ಬೀದಿಯಲ್ಲಿ ನಿಂತು ನಾನು ವಿಡಿಯೋ ಮಾಡುತ್ತಿದ್ದೇನೆ. ಸುಳ್ಳು ಆರೋಪದ ಮೇರೆಗೆ ನಾವು 400 ದಿನ ಜೈಲಿನಲ್ಲಿದ್ದೇವೆ" ಎಂದು ಹೇಳಿದ್ದಾರೆ.
"ನಮ್ಮ ಮೇಲಿನ ಆರೋಪ ಸಾಬೀತಾಗದೇ ಇದ್ದ ಕಾರಣ ನ್ಯಾಯಾಲಯದ ಆದೇಶದ ಮೇಲೆ ಮಾರ್ಚ್ 9ರಂದು ನಾವು ಬಿಡುಗಡೆಯಾಗಿದ್ದೇವೆ. ಆದರೆ, ಇಲ್ಲಿ ನಮ್ಮನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಜೀವ ಅಪಾಯದಲ್ಲಿದೆ. ಇಲ್ಲಿಂದ ಪಾರಾಗಲು ಪ್ರತಿಯೋರ್ವರ ಬಳಿ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದೇವೆ" ಎಂದಿದ್ದಾರೆ.
ಯುವಕರ ವಿಡಿಯೋ ಹಾಗೂ ಅವರ ಕುಟುಂಬದ ಮನವಿಯೊಂದಿಗೆ ಭಾರತೀಯ ವಿಶ್ವ ವೇದಿಕೆ ಪ್ರಧಾನಿ ಅವರಿಗೆ ಮನವಿ ಮಾಡಿದ್ದು, ಯುವಕರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಲಿಖಿತ ಅಹವಾಲು ಸಲ್ಲಿಸಿದೆ. ಕೆಲ ದುಷ್ಟ ಏಜೆಂಟ್ಗಳು ಲಾಭದಾಸೆಗೋಸ್ಕರ ಯುವಕರನ್ನು ಇರಾನ್ಗೆ ಸಾಗಿಸುವ ಕುತಂತ್ರ ಮಾಡಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ವಿಡಿಯೋದಲ್ಲಿ ಯುವಕರು ಒತ್ತಾಯಿಸಿದ್ದಾರೆ.