ಪೇಶಾವರ, ಜು 14 (DaijiworldNews/PY): ಬಸ್ನಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ 9 ಮಂದಿ ಚೀನಾದ ಕಾರ್ಮಿಕರು ಸೇರಿ 13 ಮಂದಿ ಸಾವನ್ನಪ್ಪಿರುವ ಘಟನೆ ವಾಯುವ್ಯ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸ್ಪೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದರೆ, ತನ್ನ ದೇಶದ ಪ್ರಜೆಗಳು ದಾಳಿಗೆ ಒಳಗಾಗಿದ್ದಾರೆ ಎಂದು ಇಸ್ಲಾಮಾಬಾದ್ನ ಚೀನಾದ ರಾಯಭಾರ ಕಚೇರಿ ತಿಳಿಸಿದೆ.
"ಬಸ್ನಲ್ಲಿ ಚೀನಾದ ಎಂಜಿನಿಯರ್ಗಳು ಸೇರಿದಂತೆ ಸರ್ವೇಯರ್ಗಳು ಹಾಗೂ ಮೆಕ್ಯಾನಿಕ್ ಸಿಬ್ಬಂದಿಗಳನ್ನು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದಸು ಅಣೆಕಟ್ಟು ನಿರ್ಮಾಣದ ಸ್ಥಳಕ್ಕೆ ಕರೆದೊಯ್ಯಲಾಗುತ್ತಿತ್ತು" ಸುದ್ದಿಸಂಸ್ಥೆಯೊಂದಕ್ಕೆ ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಸ್ಫೋಟದ ಸಂದರ್ಭ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ ಬಸ್ ಕಂದಕಕ್ಕೆ ಬಿದ್ದಿದೆ. ಪರಿಣಾಮ ಚೀನಾದ 28 ಪ್ರಜೆಗಳು ಗಾಯಗೊಂಡಿದ್ದಾರೆ" ಎಂದು ಹೇಳಿದ್ದಾರೆ.
"ಇದೊಂದು ಭಾರೀ ಸ್ಪೋಟವಾಗಿದ್ದು, ಸ್ಪೋಟದ ಸ್ವರೂಪ ಇನ್ನೂ ತಿಳಿದಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
"ಚೀನಾದ ಸಂಸ್ಥೆಗಳು ತಮ್ಮ ಭದ್ರತಾ ಕಾರ್ಯವಿಧಾನಗಳನ್ನು ಬಲಪಡಿಸಬೇಕು" ಎಂದು ಚೀನಾದ ರಾಯಭಾರ ಕಚೇರಿ ಹೇಳಿದೆ.