ಡೊಮಿನಿಕಾ, ಜು 15 (DaijiworldNews/PY): ಡೊಮಿನಿಕಾ ಹೈಕೋರ್ಟ್ನಿಂದ ಜಾಮೀನು ಪಡೆದಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರು ಆಂಟಿಗುವಾ ಹಾಗೂ ಬಾರ್ಬುಡಾಗೆ ಮರಳಿದ್ದಾರೆ.
ಅಕ್ರಮವಾಗಿ ಪ್ರವೇಶಿಸಿದ ಕಾರಣಕ್ಕೆ ಡೊಮಿನಿಕಾದಲ್ಲಿ 51 ದಿನಗಳ ಕಾಲ ಬಂಧನದಲ್ಲಿದ್ದ ಚೋಕ್ಸಿ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಡೊಮಿನಿಕಾ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು.
ಅಕ್ರಮವಾಗಿ ಡೊಮಿನಿಕಾಗೆ ಪ್ರವೇಶಿಸಿದ್ದಕ್ಕಾಗಿ ಚೋಕ್ಸಿ 51 ದಿನಗಳ ಕಾಲ ಬಂಧನದಲ್ಲಿದ್ದರು. ಇದು ಅಪಹರಣ ಯೋಜನೆಯಾಗಿದ್ದು, ಅಪಹರಣದ ಸಮಯದಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಚೋಕ್ಸಿ ಅವರ ಸಿಟಿ ಸ್ಕ್ಯಾನ್ ಸೇರಿದಂತೆ ಇತರೆ ವೈದ್ಯಕೀಯ ವರದಿಗಳನ್ನು ಚೋಕ್ಸಿ ಪರ ವಕೀಲರು ಲಗತ್ತಿಸಿದ್ದರು. ಚೋಕ್ಸಿ ಅವರಿಗೆ ನರವಿಜ್ಞಾನಿಗಳು ಹಾಗೂ ನರಶಸ್ತ್ರಚಿಕಿತ್ಸಕರ ಸಲಹೆ ಮತ್ತು ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಅಲ್ಲಿನ ವೈದ್ಯರು ಶಿಫಾರಸ್ಸು ಮಾಡಿದ್ದರು. ಡೊಮಿನಿಕಾ ದ್ವೀಪದಲ್ಲಿ ಈ ಸೇವೆಗೆಳು ಲಭ್ಯವಿಲ್ಲ ಎಂದು ತಿಳಿಸಲಾಗಿತು. ಈ ಎಲ್ಲಾ ಕಾರಣಗಳ ಹಿನ್ನೆಲೆ ಚೋಕ್ಸಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಮೆಹುಲ್ ಚೋಕ್ಸಿ ಅವರು ಜಾಮೀನಿಗಾಗಿ 10 ಸಾವಿರ ಡಾಲರ್ (7.45 ಲಕ್ಷ ರೂ.) ಅನು ಠೇವಣಿಯಾಗಿಟ್ಟಿದ್ದು, ಚಾರ್ಟ್ರ್ಡ್ ವಿಮಾನದಲ್ಲಿ ಹಿಂತಿರುಗಿದ್ದಾರೆ ಎಂದು ಆಂಟಿಗುವಾ ಮಾಧ್ಯಮಗಳ ವರದಿ ಮಾಡಿವೆ.
2017 ನವೆಂಬರ್ನಿಂದ ಕೆರಿಬಿಯನ್ ದ್ವೀಪ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನಾಗರಿಕತ್ವ ಪಡೆದಿರುವ ಚೋಕ್ಸಿಯನ್ನು ಅಕ್ರಮವಾಗಿ ಪ್ರವೇಶಿಸಿದ ಕಾರಣಕ್ಕೆ ಮೇ 23ರಂದು ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು.