ಅಪ್ಘಾನ್, ಜು 16 (DaijiworldNews/PY): ಅಫ್ಘಾನಿಸ್ತಾನ್ ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಭಾರತೀಯ ಛಾಯಗ್ರಾಹಕರೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ರಾಯಿಟರ್ಸ್ ಮುಖ್ಯ ಫೋಟೋಗ್ರಾಫರ್ ಡ್ಯಾನಿಷ್ ಸಿದ್ದಿಕಿ ಎಂದು ಗುರುತಿಸಲಾಗಿದೆ.
ಡ್ಯಾನಿಶ್ ಸಿದ್ದಿಕಿ ಅವರು ದೂರದರ್ಶನ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು, ಬಳಿಕ ಅವರು ಫೋಟೋಜರ್ನಲಿಸಂಗೆ ಬದಲಾದರು. ಸಿದ್ದಿಕಿ ಅವರು ಅಂತರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ನಲ್ಲಿ ಫೋಟೋಜರ್ನಲಿಸ್ಟ್ ಆಗಿದ್ದರು.
2018 ರಲ್ಲಿ, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು ಬಗ್ಗೆ ಫೀಚರ್ ಛಾಯಾಚಿತ್ರಗಳನ್ನು ದಾಖಲಿಸಿದ್ದ ಸಿದ್ದಕಿ ಹಾಗೂ ಅವರ ಸಹೋದ್ಯೋಗಿ ಅದ್ನಾನ್ ಅಬಿದಿ ಇಬ್ಬರಿಗೂ ಪತ್ರಿಕೋದ್ಯಮದ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಲಭಿಸಿತ್ತು.
ತಾಲಿಬಾನ್ ಹಾಗೂ ಸರ್ಕಾರಿ ಪಡೆಗಳ ನಡುವಿನ ಘರ್ಷಣೆಯ ಮಧ್ಯೆ ಡ್ಯಾನಿಶ್ ಸಿದ್ದಿಕಿ ಅವರು ಕೊಲ್ಲಲ್ಪಟ್ಟರು. ಈ ಪ್ರದೇಶದಿಂದ ಯುಎಸ್ ನೇತೃತ್ವದ ಅಂತರಾಷ್ಟ್ರೀಯ ಪಡೆಗಳು ಹಿಂದಕ್ಕೆ ಸರಿಯುತ್ತಿರುವ ಕಾರಣ ಘರ್ಷಣೆ ತೀವ್ರಗೊಂಡಿದೆ. ಉತ್ತರ ಮತ್ತು ಪಶ್ಚಿಮದಲ್ಲಿ ಹಲವಾರು ಜಿಲ್ಲೆಗಳು ಮತ್ತು ಗಡಿಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ.