ದುಬೈ, ಜು.16 (DaijiworldNews/HR): ಯುಎಇ ಸರ್ಕಾರವು ಜುಲೈ ಅಂತ್ಯದ ವೇಳೆಗೆ ಭಾರತೀಯರ ಪ್ರವೇಶ ನಿಷೇಧವನ್ನು ತೆಗೆದುಹಾಕುವ ನಿರೀಕ್ಷೆಯಿದೆ ಎಂಬ ಮಾಹಿತಿಯನ್ನು ದುಬೈನ ಭಾರತೀಯ ಕಾನ್ಸುಲ್ ಜನರಲ್ ಅಮನ್ ಪುರಿ ತಿಳಿಸಿದ್ದು, ನಿಷೇಧವನ್ನು ತೆಗೆದುಹಾಕುವ ಬಗ್ಗೆ ಯುಎಇ ಅಧಿಕಾರಿಗಳೊಂದಿಗೆ ಚರ್ಚೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಯುಎಇ ಅಧಿಕಾರಿಗಳು ಈ ತಿಂಗಳ ಅಂತ್ಯದ ವೇಳೆಗೆ ಪ್ರಯಾಣ ನಿಷೇಧವನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ನಿವಾಸಿ ವೀಸಾ ಹೊಂದಿರುವವರಿಗೆ ಮೊದಲ ಆದ್ಯತೆ ಸಿಗುತ್ತದೆ.
ಯುಎಇಗೆ ಮರಳಿದ ನಂತರ ಅನೇಕ ಜನರು ಮತ್ತೆ ಕರ್ತವ್ಯಕ್ಕೆ ಸೇರಬೇಕಾಗುತ್ತದೆ. ಅಕ್ಟೋಬರ್ 1 ರಂದು ಎಕ್ಸ್ಪೋ ಪ್ರಾರಂಭವಾಗುವ ಹೊತ್ತಿಗೆ ಎಲ್ಲಾ ಪ್ರಯಾಣ ನಿರ್ಬಂಧಗಳನ್ನು ಹಿಂಪಡೆಯಲಾಗುವುದು ಎಂಬ ಆಶಾವಾದವನ್ನು ಅಮನ್ ಪುರಿ ವ್ಯಕ್ತಪಡಿಸಿದರು.
ರಜೆ ಮೇಲೆ ಬಂದ ನೂರಾರು ಭಾರತೀಯರು ಪ್ರಯಾಣ ನಿಷೇಧದಿಂದಾಗಿ ಯುಎಇಗೆ ಮರಳಲು ಸಾಧ್ಯವಾಗಲಿಲ್ಲ. ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ಯುಎಇ ಸರ್ಕಾರದಿಂದ ಅಧಿಕೃತ ನಿರ್ದೇಶನಕ್ಕಾಗಿ ಕಾಯುವುದು ಸೂಕ್ತವಾಗಿದೆ.