ಬರ್ಲಿನ್, ಜು 16 (DaijiworldNews/PY): "ಕೊರೊನಾ ಸಾಂಕ್ರಾಮಿಕ ಹಾಗೂ ಚೀನಾದ ವುಹಾನ್ ಪ್ರಯೋಗಾಲಯದ ಸೋರಿಕೆ ನಡುವಿನ ಸಂಭಾವ್ಯ ಸಂಬಂಧವನ್ನು ತಳ್ಳಹಾಕಲಾಗದು" ಎಂದು ಡಬ್ಲ್ಯುಹೆಚ್ಒ ಮುಖ್ಯಸ್ಥ ಟೆಡ್ರೊಸ್ ಗೆಬ್ರೇಷಿಯಸ್ ತಿಳಿಸಿದ್ದಾರೆ.
"ಚೀನಾವು, ಕೊರೊನಾ ವೈರಸ್ ಉಗಮದ ಬಗ್ಗೆ ಶೋಧ ಕಾರ್ಯ ಕೈಗೊಂಡಿರುವ ವಿಜ್ಞಾನಿಗಳೊಂದಿಗೆ ಹೆಚ್ಚು ಪಾರದರ್ಶಕವಾಗಿರುವುದು ಮುಖ್ಯ" ಎಂದಿದ್ದಾರೆ.
"ಈ ವಿಚಾರಕ್ಕೆ ಸಂಬಂಧಪಟ್ಟಂತೆ ಚೀನಾ ಮುಕ್ತವಾಗಿರಬೇಕು ಹಾಗೂ ತನಿಖೆಗೆ ಸಹಕರಿಸಬೇಕು. ಮುಖ್ಯವಾಗಿ ಕೊರೊನಾ ಸಾಂಕ್ರಾಮಿಕದ ಆರಂಭಿಕ ದಿನಗಳಿಗೆ ಸಂಬಂಧಪಟ್ಟಂತೆ ನಾವು ಕೇಳಿದ ಮಾಹಿತಿ ಹಾಗೂ ದತ್ತಾಂಶಗಳನ್ನು ನೀಡಬೇಕು" ಎಂದು ತಿಳಿಸಿದ್ದಾರೆ.
"ರೋಗ ನಿರೋಧಕ ತಜ್ಞ, ಅಲ್ಲದೇ ಲ್ಯಾಬ್ ತಂತ್ರಜ್ಞನಾಗಿ ನಾನು ಲ್ಯಾಬ್ನಲ್ಲಿ ಕೆಲಸ ಮಾಡಿದ್ದೇನೆ. ಲ್ಯಾಬ್ನಲ್ಲಿ ಆಘಾತಗಳು ಸಂಭವಿಸುವುದು ಸಾಮಾನ್ಯ. ಚೀನಾ ಸೂಕ್ತವಾದ ಮಾಹಿತಿ ನೀಡಿದ್ದಲ್ಲಿ ಪ್ರಯೋಗಾಲಯದಿಂದ ನಿಜಕ್ಕೂ ವೈರಸ್ ಸೋರಿಕೆ ಆಗಿದೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಹೇಳಲು ಸಾಧ್ಯವಾಗುತ್ತದೆ" ಎಂದಿದ್ದಾರೆ.
"ಕೊರೊನಾ ಆರಂಭವಾಗುವ ಮುನ್ನ ಹಾಗೂ ಪ್ರಾರಂಭದ ವೇಳೆ ವುಹಾನ್ ಲ್ಯಾಬ್ನ ಪರಿಸ್ಥಿತಿ ಹೇಗಿತ್ತು ಎನ್ನುವ ಬಗ್ಗೆ ನಮಗೆ ನಿಖರವಾದ ಮಾಹಿತಿಯ ಅಗತ್ಯವಿದೆ. ಇದಕ್ಕೆ ಚೀನಾದ ಸಹಕಾರ ಮುಖ್ಯ" ಎಂದು ತಿಳಿಸಿದ್ದಾರೆ.
"ಕೊರೊನಾ ಉಗಮದ ವಿಚಾರವಾಗಿ ತನಿಖೆ ನಡೆಸುವ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಟೆಡ್ರೊಸ್ ಅವರು ಚೀನಾಕ್ಕೆ ಮನವಿ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಅಧಿಕಾರ ಇಲ್ಲ" ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞ ಹಾಗೂ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಪ್ರೊಫೆಸರ್ ಲಾರೆನ್ಸ್ ಗಸ್ಟಿನ್ ಹೇಳಿದ್ದಾರೆ.