ವಾಷಿಂಗ್ಟನ್, ಜು 17 (DaijiworldNews/PY): ಜಲಾಂತರ್ಗಾಮಿಗಳನ್ನು ಪತ್ತೆ ಮಾಡುವ ಹಾಗೂ ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುವ ಅಮೇರಿಕಾ ನಿರ್ಮಿತ, ಎಂಹೆಚ್-60 ಆರ್ ಹೆಲಿಕಾಪ್ಟರ್ ಶುಕ್ರವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ಭಾರತೀಯ ನೌಕಾಪಡೆಗೆ ಮಲ್ಟಿ ರೋಲ್ ಹೆಲಿಕಾಪ್ಟರ್ ಎಂಆರ್ಹೆಚ್ ಅನ್ನು ಔಪಚಾರಿಕವಾಗಿ ಹಸ್ತಾಂತರಿಸುವ ಸಮಾರಂಭವನ್ನು ನೇವಲ್ ಏರ್ ಸ್ಟೇಷನ್ ನಾರ್ತ್ ಐಲ್ಯಾಂಡ್, ಸ್ಯಾನ್ ಡಿಯೊಗೋದಲ್ಲಿ ನಡೆಸಲಾಯಿತು.
ಈ ಬಗ್ಗೆ ಟ್ವೀಟ್ ಮಾಡಿರುವ ಅಮೇರಿಕಾ ನೌಕಾ ವಾಯುಪಡೆ, "ಇಂದು ಉತ್ತರ ಐಲ್ಯಾಂಡ್ನ ಅಮೇರಿಕಾದ ನೌಕಾ ವಾಯುನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ವಾಯುಪಡೆಯು ಅಮೇರಿಕಾದಿಂದ ಮೊದಲ ಎರಡು ಎಂಹೆಚ್-60 ರೋಮಿಯೊ-ಸೀಹಾಕ್ಗಳನ್ನು ಪಡೆದುಕೊಂಡಿದೆ" ಎಂದು ತಿಳಿಸಿದೆ.
"ಅಮೇರಿಕಾದ ಜೊತೆಗಿನ ಒಪ್ಪಂದದಲ್ಲಿ ಭಾರತೀಯ ನೌಕಾಪಡೆಯು ಒಟ್ಟು 24 ಹೆಲಿಕಾಷ್ಟರ್ಗಳನ್ನು ಸ್ವೀಕರಿಸಿದೆ. ಅಮೇರಿಕಾ ಹಾಗೂ ಭಾರತೀಯ ನೌಕಾಪಡೆಗಳ ನಡುವಿನ ಸಹಕಾರವನ್ನು ಇದು ಹೆಚ್ಚಿಸುತ್ತದೆ" ಎಂದು ಹೇಳಿದೆ.
ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಈ ಬಗ್ಗೆ ಟ್ವೀಟ್ ಮಾಡಿದ್ದು, "ಹೆಲಿಕಾಪ್ಟರ್ಗಳ ಸೇರ್ಪಡೆಯಿಂದ ಭಾರತ ಹಾಗೂ ಅಮೇರಿಕಾದ ರಕ್ಷಣಾ ಸಂಬಂಧಗಳು ಬಲಗೊಳ್ಳುತ್ತವೆ" ಎಂದಿದ್ದಾರೆ.
ಎಂಹೆಚ್-60 ಆರ್ ಹೆಲಿಕಾಪ್ಟರ್ ಎಲ್ಲಾ ಹವಾಮಾನದಲ್ಲಿಯೂ ಚಲಾಯಿಸಬಲ್ಲ ಸಮುದ್ರ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್ನೊಂದಿಗೆ ಅನೇಕ ಕಾರ್ಯಾಚರಣೆಗಳನ್ನು ನಡೆಸಲು ವಿನ್ಯಾಸಗೊಳಿಸಲಾಗಿದೆ.