ಅಮೇರಿಕಾ, ಜು 18 (DaijiworldNews/PY): ಅಮೇರಿಕಾದ ಒರೆಗನ್ನ ಪೋರ್ಟ್ಲ್ಯಾಂಡ್ನಲ್ಲಿ ನಾಲ್ಕು ಬೇರೆ ಬೇರೆ ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
"ಕಳೆದ ಆರು ತಿಂಗಳಿನಿಂದ ಶೂಟೌಟ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಒಂದು ವರ್ಷದಲ್ಲಿ 125 ಪೊಲೀಸರು ಸಾವನ್ನಪ್ಪಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"38 ತಾಸಿನ ಅವಧಿಯಲ್ಲಿ 11 ಕಡೆಗಳಲ್ಲಿ ಶೂಟೌಟ್ ಪ್ರಕರಣಗಳು ವರದಿಯಾಗಿದ್ದು, 13 ಮಂದಿ ಗಾಯಗೊಂಡಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೋರ್ಟ್ ಲ್ಯಾಂಡ್ನಲ್ಲಿ ನಡೆದ ಮೊದಲ ಪ್ರಕರಣದಲ್ಲಿ 18 ವರ್ಷದ ಯುವತಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಘಟನೆಗೆ ಸಂಬಂಧಪಟ್ಟಂತೆ ವಿಡಿಯೋ ಅಥವಾ ಚಿತ್ರಗಳಿದ್ದರೆ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಈ ಘಟನೆ ನಡೆದ ಕೆಲವೇ ತಾಸಿನಲ್ಲಿ ನಗರದ ವಿವಿಧ ಭಾಗಗಳಲ್ಲಿ ಮೂರು ಗುಂಡಿನ ದಾಳಿ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ.
"ಪ್ರಸ್ತುತ ವರ್ಷ ಪೋರ್ಟ್ಲ್ಯಾಂಡ್ನಲ್ಲಿ ಈವರೆಗೆ 570 ಗುಂಡಿನ ದಾಳಿ ಪ್ರಕರಣಗಳು ನಡೆದಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೂಟೌಟ್ ಪ್ರಕರಣಗಳು ಹೆಚ್ಚಾಗಿದ್ದು, ಹೆಚ್ಚಿನ ಪ್ರಕರಣಗಳು ಗ್ಯಾಂಗ್ ಸಂಬಂಧಿತ ಘರ್ಷಣೆಯಾಗಿದೆ" ಎಂದು ತಿಳಿಸಿದ್ದಾರೆ.