ಇಸ್ಲಾಮಾಬಾದ್, ಜು 19 (DaijiworldNews/PY): ಅಫ್ಘಾನಿಸ್ತಾನ್ ರಾಯಭಾರಿಯ ಮಗಳನ್ನು ಪಾಕಿಸ್ತಾನದ ದುಷ್ಕರ್ಮಿಗಳು ಅಪಹರಿಸಿದ ಘಟನೆಯ ಬಳಿಕ ಜಾಗತಿಕವಾಗಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.
ಅಫ್ಘಾನಿಸ್ತಾನದ ರಾಯಭಾರಿಯ ಮಗಳಾದ ಸಿಲ್ಸಿಲಾ ಅಲಿಖಿಲ್ ಅವರನ್ನು ಜುಲೈ 16ರಂದು ಅಪಹರಣ ಮಾಡಲಾಗಿತ್ತು. ಸಿಲ್ಸಿಲಾ ಅಲಿಖಿಲ್ ಅವರು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಮಾರ್ಗಮಧ್ಯೆ ಅಪರಿಚಿತರು ಅವರನ್ನು ಅಪಹರಣ ಮಾಡಿದ್ದು, ಚಿತ್ರಹಿಂದೆ ನೀಡಿದ್ದರು. ಅಪಹರಣಕಾರರಿಂದ ಬಿಡುಗಡೆಯಾದ ಬಳಿಕ ಸಿಲ್ಸಿಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಫ್ಘಾನಿಸ್ತಾನ ಈ ಘಟನೆಯಿಂದ ಆಕ್ರೋಶಗೊಂಡಿದ್ದು, ಪಾಕ್ನಲ್ಲಿರುವ ತನ್ನ ರಾಯಭಾರಿ ಹಾಗೂ ಹಿರಿಯ ಅಧಿಕಾರಿಗಳನ್ನು ವಾಪಾಸ್ಸು ಕರೆಸಿಕೊಂಡಿದೆ. ಭದ್ರತಾ ಬೆದರಿಕೆಗಳು ಪರಿಹಾರವಾಗುವವರೆಗೂ ಅಫ್ಘಾನಿಸ್ತಾನದ ರಾಯಭಾರಿ ಹಾಗೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರನ್ನು ಅಫ್ಘನ್ ಸರ್ಕಾರ ವಾಪಾಸ್ಸು ಕರೆಸಿಕೊಳ್ಳಲಾಗುವುದು ಎಂದು ತಿಳಿಸಿದೆ.
ಈ ಕಾರಣದಿಂದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದ್ದು, ಶೀಘ್ರವೇ ಅಫ್ಘನ್ ನಿಯೋಗವು ಪಾಕ್ಗೆ ಭೇಟಿ ನೀಡಲಿದೆ. ಈ ಸಂದರ್ಭ ಈ ಪ್ರಕರಣ ಹಾಗೂ ಎಲ್ಲಾ ಸಮಸ್ಯೆಗಳ ವಿಚಾರವಾಗಿ ಚರ್ಚೆ ನಡೆಸಲಿದೆ ಎನ್ನಲಾಗಿದೆ.