ವಾಷಿಂಗ್ಟನ್, ಜು 21 (DaijiworldNews/PY): "ಅಮೇರಿಕಾದಲ್ಲಿ ಲಸಿಕಾ ಅಭಿಯಾನದ ಕಾರಣ ಕೊರೊನಾ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಆದರೆ, ಜನತೆ ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ತಳಿಯಿಂದ ಜಾಗರೂಕರಾಗಿರಬೇಕು" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಸಿದ್ದಾರೆ.
ಬಿಡೆನ್ ನೇತೃತ್ವದ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆ ನಡೆಸಿದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಅವರು, "ಲಸಿಕಾ ಅಭಿಯಾನದಿಂದ ಕಳೆದ ಆರು ತಿಂಗಳಿನಲ್ಲಿ ಕೊರೊನಾ ಸಾವಿನ ಸಂಖ್ಯೆ ಶೇ.90ರಷ್ಟು ಇಳಿಕೆಯಾಗಿದೆ. ಈಗ ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ಸಾವನ್ನಪ್ಪಿದ್ದ ಹೆಚ್ಚಿನ ಮಂದಿ ಲಸಿಕೆ ಪಡೆಯದವರು. ಹಾಗಾಗಿ ಕೊರೊನಾ ನಿಯಂತ್ರಣಕ್ಕೆ ಲಸಿಕೆ ತೆಗೆದುಕೊಳ್ಳುವುದು ಸೂಕ್ತ" ಎಂದಿದ್ದಾರೆ.
"ಮುಂಬರುವ ವಾರಗಳಲ್ಲಿ ಡೆಲ್ಟಾ ರೂಪಾಂತರ ತಳಿಯು ತೀವ್ರಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಮೇರಿಕಾದ ಹಲವು ಭಾಗಗಳಲ್ಲಿ ವರಿದಯಾದ ಹೊಸ ಪ್ರಕರಣಗಳಲ್ಲಿ ಶೇ.80ರಷ್ಟು ಡೆಲ್ಟಾ ರೂಪಾಂತರ ತಳಿ ಪ್ರಕರಣಗಳಿವೆ" ಎಂದು ಹೇಳಿದ್ದಾರೆ.
"ಕೇವಲ ಅಮೇರಿಕಾ ಮಾತ್ರವಲ್ಲದೇ, ಇತರ ರಾಷ್ಟ್ರಗಳ ನಾಗರಿಕರೂ ಲಸಿಕೆ ಪಡೆಯಲು ನಾವು ನೆರವಾಗುತ್ತಿದ್ದೇವೆ. ಇದರ ಜೊತೆ ಉದ್ಯೋಗ ಸೃಷ್ಟಿ ಹಾಗೂ ಮಧ್ಯಮ ವರ್ಗದವರ ಏಳಿಗೆಗಾಗಿ ದುಡಿಯುತ್ತಿದ್ದೇವೆ. ನಮ್ಮ ಜೊತೆ ಬೇರೆ ದೇಶದ ಆರ್ಥಿಕತೆಯೂ ಕೂಡಾ ಬೆಳೆಯಬೇಕು. ಅಮೇರಿಕಾದ ಆರ್ಥಿಕತೆ ಐತಿಹಾಸಿಕ ಪ್ರಗತಿ ಸಾಧಿಸಿದೆ" ಎಂದಿದ್ದಾರೆ.
"ವಯಸ್ಕರು ಹಾಗೂ ಮಕ್ಕಳು ಡೆಲ್ಟಾ ರೂಪಾಂತರ ತಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಪ್ರಕರಣದ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ" ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.