ವಾಷಿಂಗ್ಟನ್, ಜು 23 (DaijiworldNews/PY): "ಭಾರತದಲ್ಲಿ ಶುದ್ಧ ಇಂಧನ ಉತ್ಪಾದನೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ" ಎಂದು ಅಮೇರಿಕಾ ಶ್ಲಾಘಿಸಿದೆ.
ಅಮೇರಿಕಾದ ವಿಶೇಷ ಪ್ರತಿನಿಧಿಯಾಗಿರುವ ಜಾನ್ ಕೆರ್ರಿಯವರ ಹಿರಿಯ ಸಲಹೆಗಾರ ಜೋನಾಥನ್ ಪರ್ಶಿಂಗ್ ಅವರು ಹವಾಮಾನ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಈ ವಿಚಾರವನ್ನು ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.
"ಕೊರೊನಾ ಬಿಕ್ಕಟ್ಟಿನ ನಡುವೆಯೂ, ಭಾರತದಲ್ಲಿ ಶುದ್ಧ ಇಂಧನ ಉತ್ಪಾದನೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ" ಎಂದು ಪರ್ಶಿಂಗ್ ಹೇಳಿದ್ದಾರೆ.
"ಅಮೇರಿಕಾ ಹಾಗೂ ಭಾರತ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬದ್ದತೆ ಹೊಂದಿರುವ ಪಾಲುದಾರ ರಾಷ್ಟ್ರಗಳು" ಎಂದಿದ್ದಾರೆ.
"ಯುಎಸ್-ಇಂಡಿಯಾ ಹವಾಮಾನ ಹಾಗೂ ಶುದ್ಧ ಇಂಧನ ಕಾರ್ಯಸೂಚಿ- 2030 ಸಹಭಾಗಿತ್ವಕ್ಕೆ ಕಳೆದ ಎಪ್ರಿಲ್ನಲ್ಲಿ ಭಾರತ ಹಾಗೂ ಅಮೇರಿಕಾ ಸಹಿ ಹಾಕಿದವು. ಉಭಯ ದೇಶಗಳು, ಪರಿಸರಕ್ಕೆ ಹಾನಿಯಾಗದಂತಹ ಶುದ್ಧ ಇಂದನ ಸೇರಿದಂತೆ ತಂತ್ರಜ್ಞಾನಗಳ ಬಳಕೆ ಹಾಗೂ ಹವಾಮನ ಬದಲಾವಣೆ ನಿಯಂತ್ರಣಕ್ಕಾಗಿ ಕಾರ್ಯಸೂಚಿ ರೂಪಿಸಿವೆ" ಎಂದು ತಿಳಿಸಿದ್ದಾರೆ.