ವಾಷಿಂಗ್ಟನ್, ಜು 24 (DaijiworldNews/PY): "ಭಾರತ ಹಾಗೂ ಪಾಕಿಸ್ತಾನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು. ಇದರ ಜೊತೆ ಉಭಯ ದೇಶಗಳು ಪರಸ್ಪರ ಒಮ್ಮತದಿಂದ ಕೆಲಸ ಮಾಡುವ ಅಗತ್ಯವಿದೆ" ಎಂದು ಅಮೇರಿಕಾ ತಿಳಿಸಿದೆ.
ಈ ವಿಚಾರವಾಗಿ ಮಾತನಾಡಿರುವ ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಡೀನ್ ಥಾಂಪ್ಸನ್, "ಭಾರತ ಹಾಗೂ ಪಾಕಿಸ್ತಾನ ಉಭಯ ದೇಶಗಳು ಜೊತೆಯಾಗಿ ಕೆಲಸ ಮಾಡಬೇಕು ಎಂದು ಅಮೇರಿಕಾ ಬಲವಾಗಿ ನಂಬುತ್ತದೆ" ಎಂದಿದ್ದಾರೆ.
"ಭಾರತ ಹಾಗೂ ಪಾಕಿಸ್ತಾನದ ನಡುವೆ ಸ್ಥಿರವಾದ ಸಂಬಂಧಗಳನ್ನು ಬೆಳೆಸುವ ಮಾರ್ಗಗಳನ್ನು ಕಂಡುಕೊಳ್ಳುವ ಯತ್ನಗಳು ಮುಂದುವರಿಸಲು ಅಮೇರಿಕಾ ಎಂದಿಗೂ ಪ್ರೋತ್ಸಾಹಿಸುತ್ತದೆ" ಎಂದು ಹೇಳಿದ್ದಾರೆ.
ಮುಂದಿನ ವಾರ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅಫ್ಘಾನಿಸ್ತಾನದ ಕೆಲವು ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು 370ನೇ ವಿಧಿ ಅನ್ವಯ ರದ್ದುಪಡಿಸಿದ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಇನ್ನಷ್ಟು ಹದಗೆಟ್ಟಿದೆ.