ವಾಷಿಂಗ್ಟನ್, ಜು 25 (DaijiworldNews/PY): "ಲಕ್ಷಾಂತರ ಕೊರೊನಾ ಡೋಸ್ ಲಸಿಕೆಗಳು ಭಾರತಕ್ಕೆ ಕಳುಹಿಸಲು ಸಿದ್ಧವಾಗಿವೆ" ಎಂದು ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.
"ಭಾರತಕ್ಕೆ ಕಳುಹಿಸಿಕೊಡಲು ಲಕ್ಷಾಂತರ ಡೋಸ್ ಕೋವಿಡ್ ಲಸಿಕೆಗಳು ಸಿದ್ಧವಾಗಿದ್ದು, ಭಾರತ ಸರ್ಕಾರವು ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿದ ತಕ್ಷಣವೇ ಲಸಿಕೆಗಳನ್ನು ಕಳುಹಿಸಿಕೊಡಲಾಗುವುದು" ಎಂದಿದ್ದಾರೆ.
"ಈಗಾಗಲೇ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಹಾಗೂ ಇತರ ನೆರೆ ರಾಷ್ಟ್ರಗಳಿಗೆ ಲಸಿಕೆಗಳನ್ನು ನೀಡುವ ಪ್ರಕ್ರಿಯೆಯನ್ನುಅಮೇರಿಕಾ ಪ್ರಾರಂಭಿಸಿದೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಭಾರತ ಇನ್ನಷ್ಟೆ ತೀರ್ಮಾನಿಸಬೇಕಾದ್ದರಿಂದ ಭಾರತಕ್ಕೆ ಅಮೇರಿಕಾದಿಂದ ಇಲ್ಲಿಯವರೆಗೆ ಲಸಿಕೆ ಪೂರೈಕೆಯಾಗಿಲ್ಲ. ಅಮೇರಿಕಾದ ಮೊಡೆರ್ನಾ ಸೇರಿದಂತೆ ಜಾನ್ಸನ್ ಆಂಡ್ ಜಾನ್ಸನ್ ಹಾಗೂ ಫೈಜರ್ ಲಸಿಕೆಗಳಿಗೆ ಅನುಮೋದನೆ ನೀಡುವಂತೆ ಭಾರತ ಸರ್ಕಾರವನ್ನು ಜೋ ಬಿಡೆನ್ ಆಡಳಿತ ಕೇಳಿಕೊಂಡಿದೆ.
ಜುಲೈ 27ರಿಂದ ಆಂಟನಿ ಬ್ಲಿಂಕೆನ್ ಅವರು ಭಾರತ ಪ್ರವಾಸ ಆರಂಭಿಸಲಿದ್ದಾರೆ. ಇದು ಬ್ಲಿಂಕೆನ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಬ್ಲಿಂಟನ್ ಅವರು ಪ್ರವಾಸದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.