ಬೀಜಿಂಗ್, ಜು 28 (DaijiworldNews/PY): ಭಾರತದ ಸಿಬ್ಬಂದಿಗಳು ಇರುವ ವಾಣಿಜ್ಯ ಹಡಗುಗಳು ದೇಶದ ಬಂದರು ಪ್ರವೇಶಿಸುವುದನ್ನು ಅನಧಿಕೃತವಾಗಿ ನಿಷೇಧಿಸಲಾಗಿದೆ ಎನ್ನುವ ವರದಿಯನ್ನು ಚೀನಾ ಸರ್ಕಾರ ತಳ್ಳಿಹಾಕಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್, "ಈ ವಿಚಾರದ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಬಳಿ ವಿಚಾರಿಸಲಾಗಿದೆ. ಯಾವುದೇ ಅನಧಿಕೃತ ನಿಷೇಧ ಹೇರಿಲ್ಲ" ಎಂದು ತಿಳಿಸಿದ್ದಾರೆ.
"ಭಾರತದ ನೌಕಾ ಸಿಬ್ಬಂದಿಯ ಉದ್ಯೋಗಗಳನ್ನು ರಕ್ಷಿಸಬೇಕು. ಚೀನಾಕ್ಕೆ ತೆರಳುವ ಹಡಗುಗಳು ಭಾರತೀಯರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಸುಮಾರು 20,000 ಭಾರತೀಯ ನೌಕಾ ಸಿಬ್ಬಂದಿಗಳು ಮನೆಯಲ್ಲೇ ಉಳಿಯುವಂತಾಗಿದೆ" ಎಂದು ಇತ್ತೀಚೆಗೆ ಇತ್ತೀಚೆಗೆ ಕೇಂದ್ರ ಬಂದರು, ಜಲಸಾರಿಗೆ ಸಚಿವರಿಗೆ ಅಖಿಲ ಭಾರತ ನೌಕಾ ಉದ್ಯೋಗಿಗಳ ಒಕ್ಕೂಟ ಪತ್ರ ಬರೆದಿತ್ತು.
"ಭಾರತೀಯ ಸಿಬ್ಬಂದಿ ಇರುವ ಹಡಗುಗಳಿಗೆ 2021ರ ಮಾರ್ಚ್ ನಂತರ ತನ್ನ ಬಂದರುಗಳನ್ನು ಪ್ರವೇಶಿಸಲು ಚೀನಾ ಅನುಮತಿ ನೀಡುತ್ತಿಲ್ಲ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.