ಇಸ್ಲಾಮಾಬಾದ್, ಜು 29 (DaijiworldNews/PY): "ತಾಲಿಬಾನಿಗಳು ಉಗ್ರರಲ್ಲ. ಅವರೂ ಕೂಡಾ ಸಾಮಾನ್ಯ ನಾಗರೀಕರು" ಎಂದು ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, "ತಾಲಿಬಾನ್ ಎಂದು ಗುರುತಿಸಲಾಗಿರುವವರ ಪೈಕಿ ಹೆಚ್ಚಿನ ಮಂದಿ ಜನಸಾಮಾನ್ಯರಿದ್ದಾರೆ. ಗಡಿಯಲ್ಲಿ ಮೂರು ಮಿಲಿಯನ್ ಅಫ್ಘನ್ ನಿರಾಶ್ರಿತರಿದ್ದಾರೆ. ಅವರನ್ನು ಹೇಗೆ ಹತ್ಯೆ ಮಾಡಲು ಸಾಧ್ಯ?" ಎಂದು ಕೇಳಿದ್ದಾರೆ.
ಪಾಕಿಸ್ತಾನದಲ್ಲಿ ತಾಲಿಬಾನ್ ಸುರಕ್ಷಿತ ತಾಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ಸುರಕ್ಷಿತ ತಾಣಗಳು ಎಲ್ಲಿವೆ?. ಸುಮಾರು ಮೂರು ದಶಲಕ್ಷ ನಿರಾಶ್ರಿತರು ಪಾಕಿಸ್ತಾನದಲ್ಲಿ ಇದ್ದಾರೆ. ತಾಲಿಬಾನ್ನಂತೆ ಅವರೂ ಕೂಡಾ ಒಂದೇ ಜನಾಂಗದವರಾಗಿದ್ದಾರೆ" ಎಂದಿದ್ದಾರೆ.
"30 ಲಕ್ಷ ಅಫ್ಘನ್ ನಿರಾಶ್ರಿತರಿಗೆ ಪಾಕ್ ಆಶ್ರಯ ನೀಡುತ್ತಿದೆ. ಈ ಪೈಕಿ ಹೆಚ್ಚಿನ ಮಂದಿ ಪಶ್ತೂನ್ ಹಾಗೂ ತಾಲಿಬಾನ್ ಹೋರಾಟಗಾರರ ಜನಾಂಗದವರಿದ್ದಾರೆ. ಸದ್ಯಕ್ಕೆ ಐದು ಲಕ್ಷ ಶಿಬಿರಗಳಿದ್ದು, ಆ ಪೈಕಿ ಕೆಲವು ಉಗ್ರ ಸಂಘಟನೆಗಳಿಗೆ ಸೇರಿದವರಾಗಿಲ್ಲ. ಅದರಲ್ಲಿ ಜನಸಾಮಾನ್ಯರೂ ಕೂಡಾ ಒಳಗೊಂಡಿದ್ದಾರೆ. ಅವರನ್ನು ಹೇಗೆ ಕೊಲ್ಲಲು ಸಾಧ್ಯ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ತಾಲಿಬಾನ್ಗಳಿಗೆ ಅಫ್ಘಾನಿಸ್ತಾನ ಸರ್ಕಾರದ ವಿರುದ್ದದ ಹೋರಾಟದಲ್ಲಿ ಮಿಲಿಟರಿ, ಆರ್ಥಿಕ ಹಾಗೂ ಗುಪ್ತಚರ ಮಾಹಿತಿಯ ಜೊತೆ ಪಾಕಿಸ್ತಾನ ನೆರವಾಗಿದೆ ಎಂದ ಹಿಂದಿನಿಂದಲೂ ಆರೋಪಿಸಲಾಗಿದೆ. ಆದರೆ, ಈ ಆರೋಪಗಳನ್ನು ಇಮ್ರಾನ್ ಖಾನ್ ತಳ್ಳಿ ಹಾಕಿದ್ದು, ಇದು ಅನ್ಯಾಯದ ಆರೋಪವಾಗಿದೆ" ಎಂದಿದ್ದಾರೆ.