ವಾಷಿಂಗ್ಟನ್, ಜು 30 (DaijiworldNews/PY): ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ, ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅವರು ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟಿಲ್ಲ ಅಥವಾ ಗುಂಡಿನ ಚಕಮಕಿಯ ಸಂದರ್ಭ ಯಾವುದೇ ಗಾಯಗಳಾಗಿ ಅವರು ಮೃತಪಟ್ಟಿಲ್ಲ. ಬದಲಾಗಿ ಅವರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ. ಅವರ ಗುರುತು ಪರಿಶೀಲಿಸಿದ ಬಳಿಕ ತಾಲಿಬಾನಿಗಳು ಕ್ರೂರವಾಗಿ ಕೊಂದಿದ್ದಾರೆ ಎಂದು ಅಮೇರಿಕಾ ಮೂಲದ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
38 ವರ್ಷದ ಸಿದ್ದಿಕಿ ಅವರು ಕಂದಹಾರ್ ನಗರದ ಸ್ಪನ್ ಬೋಲ್ಡಾಕ್ ಪ್ರಾಂತ್ಯದಲ್ಲಿ ನಡೆದ ಅಫ್ಘಾನ್ ಪಡೆಗಳು ಹಾಗೂ ತಾಲಿಬಾನ್ ನಡುವಿನ ಘರ್ಷಣೆಯನ್ನು ವರದಿ ಮಾಡಲು ಹೋಗಿದ್ದ ಸಂದರ್ಭ ಸಿದ್ದಿಕಿ ಅವರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಈ ನಿಯತಕಾಲಿಕೆ ತಳ್ಳಿಹಾಕಿದೆ.
ವಾಷಿಂಗ್ಟನ್ ಎಕ್ಸಾಮಿನರ್ ಮ್ಯಾಗಜಿನ್ ವರದಿಯ ಪ್ರಕಾರ, ಸಿದ್ದಿಕಿ ಅವರು ಅಫ್ಘಾನ್ ರಾಷ್ಟ್ರೀಯ ಸೇನಾ ತಂಡದ ಜೊತೆ ಸ್ಪಿನ್ ಬೋಲ್ಡಾಕ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಪಾಕ್ನೊಂದಿಗೆ ಹಂಚಿಕೊಂಡಿರುವ ಗಡಿ ದಾಟುವಿಕೆಯನ್ನು ನಿಯಂತ್ರಿಸಲು ಅಫ್ಘಾನ್ ಪಡೆಗಳು ಹಾಗೂ ತಾಲಿಬಾನ್ ನಡುವಿನ ಹೋರಾಟವನ್ನು ಸೆರೆಹಿಡಿಯಲು ಸಿದ್ದಿಕಿ ಆ ಜಾಗಕ್ಕೆ ತೆರಳಿದ್ದರು. ಇನ್ನೇನು ಗಡಿ ಪ್ರದೇಶ ಹತ್ತಿರವಿದೆ ಎನ್ನುವಷ್ಟರಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಮಿಲಿಟರಿ ಪಡೆಯನ್ನು ವಿಭಜಿಸಿದ್ದು, ಸಿದ್ದಿಕಿಯಿಂದ ಕಮಾಂಡರ್ ಹಾಗೂ ಇತರ ವ್ಯಕ್ತಿಗಳು ಬೇರ್ಪಟ್ಟರು. ಇದಾದ ಬಳಿಕ ಅವರು ಇತರ ಮೂರು ಅಫ್ಘಾನ್ ಪಡೆಗಳೊಂದಿಗೆ ಇದ್ದರು.
ದಾಳಿಯ ಸಂದರ್ಭ ಸಿದ್ದಿಕಿ ಅವರಿಗೆ ಗುಂಡು ತಗುಲಿದವು. ಇದರಿಂದ ಗಾಯಗೊಂಡ ಅವರು ಹಾಗೂ ಅವರ ತಂಡ ಸ್ಥಳೀಯ ಮಸೀದಿಗೆ ಹೊಕ್ಕಿದ್ದು, ಅಲ್ಲಿ ಅವರು ಪ್ರಥಮ ಚಿಕಿತ್ಸೆ ಪಡೆದರು. ಓರ್ವ ಪತ್ರಕರ್ತ ಮಸೀದಿಯಲ್ಲಿ ಇದ್ದಾನೆ ಎನ್ನುವ ಸುದ್ದಿ ಬಿತ್ತರಿಸುತ್ತಿದ್ದಂತೆ ತಾಲಿಬಾನ್ ಅಲ್ಲಿಗೂ ದಾಳಿ ಮಾಡಿತು. ತಾಲಿಬಾನ್ ಮಸೀದಿಯ ಮೇಲೆ ದಾಳಿ ಮಾಡಿದೆ. ಅಲ್ಲಿ ಸಿದ್ದಿಕಿ ಇರುವ ಕಾರಣ ಮಾತ್ರ ದಾಳಿ ನಡೆಸಿದೆ ಎಂದು ಸ್ಥಳೀಯ ಪತ್ರಿಕಾ ವರದಿ ತಿಳಿಸಿದೆ.
ತಾಲಿಬಾನ್ ಅವರನ್ನು ವಶಪಡಿಸಿಕೊಂಡ ಸಂದರ್ಭ ಸಿದ್ದಿಕಿ ಅವರ ಜೀವಂತವಾಗಿದ್ದರು. ತಾಲಿಬಾನ್ ಸಿದ್ದಿಕಿ ಅವರ ಗುರುತನ್ನು ಪರಿಶೀಲಿಸಿತು ಹಾಗೂ ಅವರ ಜೊತೆಗಿದ್ದವರನ್ನು ಹತ್ಯೆಗೈದಿತು. ಕಮಾಂಡರ್ ಹಾಗೂ ಅವರ ತಂಡದ ಉಳಿದವರು ಆತನನ್ನು ರಕ್ಷಿಸಲು ಯತ್ನಿಸಿದರು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ವ್ಯಾಪಾಕವಾಗಿ ಹರಿದಾಡುತ್ತಿದ್ದ ಪೋಟೋವು ಸಿದ್ದಿಕಿ ಅವರ ಮುಖವನ್ನು ಹೋಲುತ್ತಿತ್ತು. ನಾನು ಆ ಫೋಟೋವನ್ನು ಇತರ ಛಾಯಾಚಿತ್ರಗಳ ಜೊತೆ ಹೋಲಿಕೆ ಮಾಡಿ ಪರಿಶೀಲಿಸಿದೆ. ಅಲ್ಲದೇ, ಸಿದ್ದಿಕಿ ಅವರ ದೇಹದ ವಿಡಿಯೋವನ್ನು ಭಾರತ ಸರ್ಕಾರದ ಮೂಲವೊಂದು ನನಗೆ ಒದಗಿಸಿತ್ತು. ಆ ವಿಡಿಯೋದಲ್ಲಿ, ತಾಲಿಬಾನಿಗಳು ಸಿದ್ದಿಕಿ ಅವರ ತಲೆಗೆ ಬಲವಾಗಿ ಹೊಡೆದು ಬಳಿಕ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಬರಹಗಾರ, ಅಮೇರಿಕನ್ ಎಂಟರ್ ಪ್ರೈಸಸ್ ಇನ್ಸ್ಟಿಟ್ಯೂಟ್ನ ಹಿರಿಯ ಸಹವರ್ತಿ ಬರಹಗಾರ ಮೈಕೆಲ್ ರೂಬಿನ್ ಬರೆದಿದ್ದಾರೆ.
ಸಿದ್ದಿಕಿ ಅವರನ್ನು ತಾಲಿಬಾನಿಗಳು ಕ್ರೂರವಾಗಿ ಕೊಂದಿದ್ದು, ನಂತರ ಅವರ ಶವವನ್ನು ವಿರೂಪಗೊಳಿಸಿದ್ದಾರೆ. ಇದು ಜಾಗತಿಕ ಯುದ್ದದ ನಿಯಮಗಳನ್ನು ಅಥವಾ ಸಂಪ್ರದಾಯಗಳನ್ನು ಗೌರವಿಸುವುದಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ವರದಿ ತಿಳಿಸಿದೆ.
ಮುಂಬೈ ಮೂಲದ ಡ್ಯಾನಿಷ್ ಸಿದ್ದಿಕಿ ಅವರು ರೊಹಿಂಗ್ಯಾ ಬಿಕ್ಕಟ್ಟಿನ ಬಗ್ಗೆ ಮಾಡಿದ ವರದಿಗೆ 2018ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದಿದ್ದರು. ಇವರು ಅಫ್ಘಾನಿಸ್ತಾನ ಸಂಘರ್ಷ, ಹಾಂಕಾಂಗ್ ಪ್ರತಿಭಟನೆಗಳು, ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಯುರೋಪ್ನ ಇತರ ಪ್ರಮುಖ ಘಟನೆಗಳ ಬಗ್ಗೆ ವರದಿ ಮಾಡಿದ್ದರು.