ಮ್ಯಾನ್ಮಾರ್, ಆ 02 (DaijiworldNews/PY): ಮ್ಯಾನ್ಮಾರ್ನ ಮಿಲಿಟರಿ ನಾಯಕ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲೇಯಿಂಗ್ ಅವರು ತನ್ನನ್ನು ತಾನು ದೇಶದ ಪ್ರಧಾನಿ ಎಂದು ಘೋಷಿಸಿಕೊಂಡಿದ್ದು, 2023ರಲ್ಲಿ ಚುನಾವಣೆ ನಡೆಸುವ ಮುನ್ನ ವಿಸ್ತೃತ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಉಸ್ತುವಾರಿ ವಹಿಸಿಕೊಳ್ಳಲು ಯೋಜಿಸಿರುವುದಾಗಿ ಹೇಳಿದ್ದಾರೆ.
ಮ್ಯಾನ್ಮಾರ್ ಸೇನೆಯು ದೇಶದ ನಾಗರಿಕ ಸರ್ಕಾರದಿಂದ ಅಧಿಕಾರವನ್ನು ಕಿತ್ತುಕೊಂಡ ಆರು ತಿಂಗಳ ನಂತರ, 2023ರಲ್ಲಿ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದೆ. ದೇಶದಲ್ಲಿ ಸೇನೆಯು 18 ತಿಂಗಳವರೆಗೆ ಆಡಳಿತವನ್ನು ವಿಸ್ತರಣೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನಾ ಮುಖ್ಯಸ್ಥರು, "ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಸಲು ಸಿದ್ದರಿದ್ದು, 2023ರ ಆಗಸ್ಟ್ ತಿಂಗಳಿನಲ್ಲಿ ತುರ್ತುಪರಿಸ್ಥಿತಿಯನ್ನು ತೆರವುಗೊಳಿಸಲಾಗುವುದು" ಎಂದಿದ್ದಾರೆ.
ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಮ್ಯಾನ್ಮಾರ್ನ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಪದಚ್ಯುತಿಗೊಳಿಸಿದ ಸುಮಾರು ಆರು ತಿಂಗಳ ಬಳಿಕ ಮಿನ್ ಆಂಗ್ ಹ್ಲೇಯಿಂಗ್ ಅವರ ಘೋಷಣೆಯಿಂದ ದೇಶಾದ್ಯಂತ ಪ್ರತಿಭಟನೆಯ ಅಲೆಗಳನ್ನು ಸೃಷ್ಟಿಸಿತು. ಇದರ ಪರಿಣಾಮ ಭದ್ರತಾ ಪಡೆಗಳು ಸುಮಾರು 1,000 ಪ್ರತಿಭಟನಾಕಾರರನ್ನು ಹತ್ಯೆಗೈದಿದ್ದವು.
"ಏಸಿಯಾನ್ ಸಹಕಾರ ಸಂಘಟನೆಯ ಜೊತೆ ಸೇರಿ ಕೆಲಸ ಮಾಡಲು ಮ್ಯಾನ್ಮಾರ್ ಸಿದ್ದವಿದ್ದು, ಮ್ಯಾನ್ಮಾರ್ನಲ್ಲಿರುವ ಏಸಿಯಾನ್ ವಿಶೇಷ ರಾಯಭಾರಿ ಜೊತೆ ಮಾತುಕತೆ ನಡೆಸಲಿದೆ" ಎಂದು ಸೇನಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.