ಕಾಬೂಲ್, ಆ 04 (DaijiworldNews/PY): "ಅಫ್ಗಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವರನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿಯ ಪರಿಣಾಮ 8 ಮಂದಿ ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಕಾಬೂಲ್ ನಗರದ ಹೊರವಲಯದಲ್ಲಿನ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ ಅವರ ಅತಿಥಿ ಗೃಹದ ಬಳಿ ಮಂಗಳವಾರ ತಡರಾತ್ರಿ ಬಾಂಬ್ ದಾಳಿ ನಡೆದಿದ್ದು, ನಂತರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭ ಎಲ್ಲಾ ನಾಲ್ಕು ಉಗ್ರರನ್ನು ಹೊಡೆದುರುಳಿಸಲಾಗಿದೆ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆಫ್ಗನ್ ಆಂತರಿಕ ಸಚಿವಾಲಯದ ವಕ್ತಾರ ಮಿರ್ವೈಸಿ ಸ್ಟಾನೆಕ್ಜೈ, "ಬಾಂಬ್ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು" ಎಂದಿದ್ದಾರೆ.
"ರಕ್ಷಣಾ ಸಚಿವರಿಗೆ ದಾಳಿಯಲ್ಲಿ ಯಾವುದೇ ರೀತಿಯಾದ ಗಾಯಗಳಾಗಿಲ್ಲ. ಬಾಂಬ್ ಸ್ಪೋಟ ಸಂಭವಿಸಿದ ಸಂದರ್ಭ ರಕ್ಷಣಾ ಸಚಿವರು ಅತಿಥಿ ಗೃಹದಲ್ಲಿರಲಿಲ್ಲ. ಅವರ ಕುಟುಂಬದ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ" ಎಂದು ತಿಳಿಸಿದ್ದಾರೆ.
"ತಾಲಿಬಾನ್, ಈ ದಾಳಿ ಸಂಪೂರ್ಣ ಹೊಣೆ ಹೊತ್ತುಕೊಂಡಿದ್ದು, ದಕ್ಷಿಣ ಹಾಗೈ ಪಶ್ಚಿಮ ಪ್ರಾಂತ್ಯಗಳ ರಾಜಧಾನಿ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ. ಅಫ್ಘನ್ ಸೇನೆಯು ವಿವಿಧ ಪ್ರಾಂತ್ಯಗಳ ಮೇಲೆ ನಡೆಸೊದ ದಾಳಿಯ ಪ್ರತಿಕಾರವಾಗಿ ಈ ಬಾಂಬ್ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದರು" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದಾರೆ.