ನೈಜೀರಿಯಾ, ಆ 09 (DaijiworldNews/PY): "ಬೊಕೊ ಹರಾಮ್ ಉಗ್ರರಿಂದ 2014 ರಲ್ಲಿ ಅಪಹರಣಕ್ಕೊಳಗಾಗಿದ್ದ ನೈಜೀರಿಯಾ ಚಿಬೋಕ್ನ ಶಾಲಾ ವಿದ್ಯಾರ್ಥಿಯೋರ್ವಳನ್ನು 7 ವರ್ಷಗಳ ಬಳಿಕ ಉಗ್ರರು ಬಿಡುಗಡೆ ಮಾಡಿದ್ದಾರೆ" ಎಂದು ಬೊರ್ನೊ ರಾಜ್ಯದ ಗವರ್ನರ್ ಹೇಳಿದ್ದಾರೆ.
"ಆಕೆಯ ತಂದೆ-ತಾಯಿಗೆ ಬಾಲಕಿಯನ್ನು ಒಪ್ಪಿಸಲಾಗಿದೆ. ಸರ್ಕಾರಿ ಪುನರ್ವಸತಿ ಕೇಂದ್ರಸಲ್ಲಿ ಆಕೆಗೆ ಮಾನಸಿಕ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಗವರ್ನರ್ ಬಬಗನ ಲುಲುಮ್ ಮಾಹಿತಿ ನೀಡಿದ್ದಾರೆ.
"ರೂತ್ ಎನ್ಗ್ಲಾದಾರ್ ಪೋಗು ಕಳೆದ ತಿಂಗಳು ತಾನು ವರಿಸಿರುವುದಾಗಿ ಹೇಳಿಕೊಂಡ ವ್ಯಕ್ತಿಯೊಂದಿಗೆ ಸೇನೆಗೆ ಶರಣಾಗಿದ್ದಾಳೆ" ಎಂದು ಗವರ್ನರ್ ತಿಳಿಸಿದ್ದಾರೆ. ಆಕೆ ಜುಲೈ 28ರಂದೇ ಅರ್ಕಾರದ ಸಂಪರ್ಕಕ್ಕೆ ಬಂದಿದ್ದಳು ಆದರೆ, ಈ ವಿಚಾರವನ್ನು ಸರ್ಕಾರ ತಡವಾಗಿ ತಿಳಿಸಿದೆ.
2014ರ ಎಪ್ರಿಲ್ನಲ್ಲಿ 12-17 ವರ್ಷದೊಳಗಿನ ಸುಮಾರು 300 ಬಾಲಕಿಯರನ್ನು ಈಶಾನ್ಯ ನೈಜೀರಿಯಾದ ಚಿಬೋಕ್ನಿಂದ ಬೊಕೊ ಹರಮ್ ಉಗ್ರರು ಅಪಹರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ #BringBackOurGirls ಎಂಬ ಹ್ಯಾಷ್ಟ್ಯಾಗ್ನಡಿಯಲ್ಲಿ ಚಳವಳಿ ನಡೆದಿತ್ತು.
"ಘಟನೆ ನಡೆದ ವರ್ಷಗಳ ಬಳಿಕ ಅನೇಕ ಬಾಲಕಿಯರನ್ನು ಬಿಡುಗಡೆ ಮಾಡಿದೆ ಅಥವಾ ಸೇನೆಯು ಅವರನ್ನು ಪತ್ತೆ ಮಾಡಿ ಬಿಡಿಸಿಕೊಂಡು ಬಂದಿದೆ. ಆದರೂ ಸಹ 100ಕ್ಕಿಂತ ಅಧಿಕ ಹೆಣ್ಣು ಮಕ್ಕಳು ಇನ್ನೂ ಪತ್ತೆಯಾಗಿಲ್ಲ" ಎಂದು ಎಪ್ರಿಲ್ನಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಹೇಳಿತ್ತು.