ಕರಾಚಿ, ಆ 11 (DaijiworldNews/MS): ವಿದೇಶಿ ಮುಸ್ಲಿಂ ಪ್ರವಾಸಿಗರನ್ನು ಸೆಳೆಯಲು , ಸರ್ಕಾರವು ದೇಶದ ಹಲವು ತಾಣಗಳಲ್ಲಿ ಅತ್ಯುತ್ತಮ ರೆಸಾರ್ಟ್ಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಮುಸ್ಲಿಂ ರಾಷ್ಟ್ರಗಳ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದೆ. ಯೂರೋಪ್ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ತಾರತಮ್ಯ ಧೋರಣೆಯ ಮನಸ್ಥಿತಿ ಹೆಚ್ಚುತ್ತಿರುವ ಕಾರಣ ಪಾಕ್ ನಂತಹ ದೇಶ ಮುಸ್ಲಿಂ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶಕ್ತಿ ಹೊಂದಿದೆ ಎಂದು ಹೇಳಿದ್ದಾರೆ.
'ಪಾಕಿಸ್ತಾನದಲ್ಲಿ ಮುಸ್ಲಿಂ ದೇಶಗಳ ಪ್ರವಾಸಿಗರಿಗೆ ಮೆಚ್ಚುಗೆಯಾಗುವಂತಹ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ರೆಸಾರ್ಟ್ ಸೇರಿದಂತೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ತಯಾರಿದೆ . ಇದಕ್ಕಾಗಿ ಪ್ರವಾಸಿ ತಾಣಗಳಲ್ಲಿ ರೆಸಾರ್ಟ್ಗಳಂತಹ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ' ಎಂದು ಅವರು ಹೇಳಿದರು.
ಇದೇ ವೇಳೆ ಹವಾಮಾನ ಬದಲಾವಣೆ ಕುರಿತು ಸೋಮವಾರ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಕುರಿತು ಮಾತನಾಡಿದ ಇಮ್ರಾನ್ ಖಾನ್, 'ಹವಾಮಾನ ಬದಲಾವಣೆಯ ಪರಿಣಾಮದಿಂದ ರಕ್ಷಿಸಿಕೊಳ್ಳುತ್ತಿರುವ ಮುಂಚೂಣಿ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶವೂ ಇದೆ ಎಂಬುದು ಒಂದು ಹೆಮ್ಮೆಯ ವಿಷಯ' ಎಂದು ಹೇಳಿದರು.