ಕಾಬೂಲ್, ಆ 14 (DaijiworldNews/PY): ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಹಲವು ಸ್ಥಳಗಳಲ್ಲಿ ತಾಲಿಬಾನ್ ತನ್ನ ಪ್ರಾಬಲ್ಯ ಸಾಧಿಸಿದ್ದು, ಇದೀಗ ಕಂದಾಹಾರ್ನ ಆಕಾಶವಾಣಿ ಕೇಂದ್ರವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ತಾಲಿಬಾನ್, "ವಶಪಡಿಸಿಕೊಂಡಿರುವ ಆಕಾಶವಾಣಿ ಕೇಂದ್ರಕ್ಕೆ ವಾಯ್ಸ್ ಆಫ್ ಷರಿಯಾ ಎಂದು ಮರುನಾಮಕರಣ ಮಾಡಲಾಗಿದೆ. ಆಕಾಶವಣಿ ಕೇಂದ್ರದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿದ್ದಾರೆ. ಇಲ್ಲಿ ಸುದ್ದಿ ಸೇರಿದಂತೆ ರಾಜಕೀಯ ವಿಶ್ಲೇಷಣೆ ಹಾಗೂ ಕುರಾನ್ ಪಠಣವನ್ನು ಪ್ರಸಾರ ಮಾಡಲಾಗುವುದು" ಎಂದು ತಿಳಿಸಿದೆ.
ಅಫ್ಗಾನಿಸ್ತಾನದಲ್ಲಿ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆ ಅಲ್ಲಿನ ಹಿಂದೂ ಹಾಗೂ ಸಿಖ್ ಕುಟುಂಬಗಳನ್ನು ಕೂಡಲೇ ಸ್ಥಳಾಂತರಿಸುವಂತೆ ವರ್ಲ್ಡ್ ಪಂಜಾಬಿ ಆರ್ಗನೈಜೇಷನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದೆ.
"ಅಫ್ಗಾನ್ ಮೂಲದ ಸಿಖ್ಖರು ಹಾಗೂ ಹಿಂದೂಗಳ ಪ್ರಾಣಕ್ಕೆ ಅಪಾಯವಿದೆ. ಹಾಗಾಗಿ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಅಗತ್ಯವಿದೆ" ಎಂದು ಡಬ್ಲ್ಯುಪಿಓನ ಅಂತರರಾಷ್ಟ್ರೀಯ ಅಧ್ಯಕ್ಷ ವಿಕ್ರಂಜೀತ್ ಸಿಂಗ್ ಸಾಹ್ನಿ ಹೇಳಿದ್ದಾರೆ.
"ಅಫ್ಗಾನಿಸ್ತಾನದಿಂದ ಆಗಮಿಸುವವರ ಪುನರ್ವಸತಿಯ ಸಂಬಂಧ ಅಗತ್ಯ ಕಾರ್ಯಗಳನ್ನು ಮಾಡಲು ಸಂಸ್ಥೆ ಸಿದ್ದವಿದೆ. ಅಲ್ಲದೇ, ಅವರಿಗೆ ಉದ್ಯೋಗ ಆಧಾರಿತ ಕೋರ್ಸ್ಗಳ ತರಬೇತಿಯನ್ನು ಕೂಡಾ ಉಚಿತವಾಗಿ ನೀಡುತ್ತೇವೆ" ಎಂದು ತಿಳಿಸಿದ್ದಾರೆ.
"ಭಾರತಕ್ಕೆ ಈಗಾಗಲೇ ವಾಪಸ್ಸಾಗಿರುವವರಿಗೆ ದೀರ್ಘಾವಧಿಯ ವೀಸಾಗಳನ್ನು ನೀಡಿದಕ್ಕಾಗಿ ಗೃಹ ಸಚಿವರಿಗೆ ಧನ್ಯವಾದಗಳು. ಇದರೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಅವರಿಗೆ ಪೌರತ್ವವನ್ನು ನೀಡಬೇಕು" ಎಂದು ಮನವಿ ಮಾಡಿದ್ದಾರೆ.