ಕಬೂಲ್, ಆ 14 (DaijiworldNews/MS): ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಬಹುತೇಕ ಸ್ಥಳಗಳಲ್ಲಿ ತಾಲಿಬಾನ್ ಉಗ್ರರು ಪ್ರಾಬಲ್ಯ ಸಾಧಿಸಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ರಾಜೀನಾಮೆ ನೀಡುತ್ತಾರೆ, ತಮ್ಮ ಕುಟುಂಬದೊಡನೆ ದೇಶವನ್ನೇ ತೊರೆಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.
ಆದರೆ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿರುವ ಅಶ್ರಫ್ ಘನಿ ತಮ್ಮ ರಾಜೀನಾಮೆ ಬಗ್ಗೆ ಯಾವುದೇ ಮಾತುಗಳನ್ನೂ ಆಡಿಲ್ಲ. ಇಂದು ಘನಿ ಅವರ ಮುದ್ರಿಸಲ್ಪಟ್ಟ ಸಂದೇಶ ಆ ದೇಶದ ಜನರನ್ನು ತಲುಪಿದೆ. ಅಫ್ಘಾನಿಸ್ತಾನವನ್ನು ತಾಲೀಬಾನ್ ಸ್ವಾಧೀನಕ್ಕೆ ಪಡೆಯುತ್ತಿರುವುದು ದೇಶಕ್ಕೆ ಎದುರಾಗಿರುವ ದೊಡ್ಡ ಕಂಟಕವಾಗಿದೆ. ಆದರೂ ಸದ್ಯ ಪರಿಸ್ಥಿತಿಗಳು ನಿಯಂತ್ರಣದಲ್ಲಿವೆ ಎಂದಿದ್ದಾರೆ. ಅಫ್ಘಾನ್ ರಕ್ಷಣೆ ಮತ್ತು ಅದಕ್ಕಾಗಿ ನಮ್ಮ ಭದ್ರತಾ ಪಡೆಯನ್ನು ಮತ್ತೆ ಸಿದ್ದಗೊಳಿಸುವುದು ನಮ್ಮ ಮುಂದಿರುವ ಪ್ರಮುಖ ಆದ್ಯತೆಯಾಗಿದೆ ಎಂದು ಘನಿ ಹೇಳಿದ್ದಾರೆ.
ತಮ್ಮ ರಾಜೀನಾಮೆ ಬಗ್ಗೆ ಯಾವುದೇ ಮಾತುಗಳನ್ನೂ ಆಡದೇ , ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದೇವೆ. ಸಂಪೂರ್ಣವಾಗಿ ಯುದ್ಧ ಘೋಷಣೆಯಾಗಲು ನಾನು ಅವಕಾಶ ಕೊಡುವುದಿಲ್ಲ. ಯುದ್ದ ಜನರ ಪ್ರಾಣ ಕಸಿಯುತ್ತದೆ .ಸಮಾಲೋಚನೆಗೆ ಒತ್ತು ಕೊಟ್ಟು ತಾಲಿಬಾನ್ನಿಂದ ಎದುರಾಗಿರುವ ಸಂಕಷ್ಟಕ್ಕೆ ಪ್ರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.