ವಾಷಿಂಗ್ಟನ್, ಆ.17 (DaijiworldNews/HR): ಅಮೇರಿಕಾದ ಸಿಬ್ಬಂದಿಯ ಮೇಲೆ ಅಫ್ಗಾನಿಸ್ತಾನದಲ್ಲಿ ದಾಳಿ ನಡೆದರೆ ಅಥವಾ ಅವರ ಕಾರ್ಯಾಚರಣೆಗೆ ಅಡ್ಡಿ ಮಾಡಿದರೆ, ಅತ್ಯಂತ ಕ್ಷಿಪ್ರ ಹಾಗೂ ಪ್ರಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ದೇಶವನ್ನು ಉದ್ದೇಶಿಸಿ ಮಾತನಾಡಿರುವ ಅವರು, "ಸ್ಥಳಾಂತರಿಸುವ, ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯ ಕುರಿತು ತಾಲಿಬಾನಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದ್ದು, ಅವರೇನಾದರೂ ನಮ್ಮ ಸಿಬ್ಬಂದಿಯ ಮೇಲೆ ದಾಳಿ ಮಾಡಿದರೆ ಅಥವಾ ನಮ್ಮ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ, ಅಮೇರಿಕಾವು ಅತ್ಯಂತ ಚುರುಕಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ" ಎಂದರು.
ಅಮೇರಿಕಾದ ಸೇನಾ ಪಡೆಯು ಹಿಂದಕ್ಕೆ ಸಾಗುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಹೆಚ್ಚಿಸುವ ಮೂಲಕ ಅಫ್ಗಾನಿಸ್ತಾನವನ್ನು ತಮ್ಮ ಹಿಡಿತಕ್ಕೆ ಪಡೆದಿದ್ದು, ದೇಶದಿಂದ ಪಲಾಯನ ಮಾಡಿ ಜೀವ ಉಳಿಸಿಕೊಳ್ಳಲು ಸಾವಿರಾರು ಜನರು ಕಾಬೂಲ್ ವಿಮಾನ ನಿಲ್ದಾಣದತ್ತ ನುಗ್ಗಿದ್ದಾರೆ. ನೂಕುನುಗ್ಗಲು ಉಂಟಾಗಿ ಅಲ್ಲಿನ ಸ್ಥಿತಿಯೂ ಅಯೋಮಯವಾಗಿದೆ, ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಈ ಮಿಷನ್ ಪೂರ್ಣಗೊಳ್ಳುತ್ತಿದ್ದಂತೆ ನಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯು ಮುಕ್ತಾಯವಾಗಲಿದೆ. ಅಮೇರಿಕಾದ ಸುದೀರ್ಘ ಸಮರವನ್ನು ರಕ್ತಸಿಕ್ತ 20 ವರ್ಷಗಳ ಬಳಿಕ ಮುಕ್ತಾಯಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.