ಕಾಬೂಲ್, ಆ 18 (DaijiworldNews/PY): "ಯಾವುದೇ ದೇಶಕ್ಕೆ ಯಾವುದೇ ರೀತಿಯಾದ ಬೆದರಿಕೆ ಒಡ್ಡುವುದಿಲ್ಲ" ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
ಮಂಗಳವಾರ ತಡ ರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದಿನ ಸರ್ಕಾರದೊಂದಿಗೆ ಕೆಲಸ ಮಾಡಿದವರ ಹಾಗೂ ವಿದೇಶಿ ಸರ್ಕಾರಗಳು ಅಥವಾ ಪಡೆಗಳೊಂದಿಗೆ ಕೆಲಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದಿಲ್ಲ. ಇಸ್ಲಾಮಿಕ್ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರು ಸಹ ಸರ್ಕಾರದಲ್ಲಿ ಪಾಲ್ಗೊಳ್ಳಬಹುದು" ಎಂದಿದ್ದಾರೆ.
"ಅಫ್ಗನ್ ಜನರಿಗೆ ನಾವು ಸಂಪೂರ್ಣವಾಗಿ ಕ್ಷಮಾದಾನ ನೀಡಿದ್ದೇವೆ. ಸರ್ಕಾರದ ರಚನೆಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಅಫ್ಗಾನಿಸ್ತಾನದಲ್ಲಿ ಶೀಘ್ರದಲ್ಲಿ ಇಸ್ಲಾಮಿಕ್ ಸರ್ಕಾರ ಸ್ಥಾಪಿಸಲಾಗುವುದು" ಎಂದು ಹೇಳಿದ್ದಾರೆ.
"ಖಾಸಗಿ ಮಾಧ್ಯಮಗಳು ಇಲ್ಲಿ ಸ್ವತಂತ್ರವಾಗಿ ಕೆಲಸ ಮಾಡಬೇಕು. ದೇಶದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಮಹಿಳೆಯರು ಆರೋಗ್ಯ ಕ್ಷೇತ್ರ ಹಾಗೂ ಇತರೆ ಕ್ಷೇತ್ರಗಳಲ್ಲಿ ಅವರಿಗೆ ಅಗತ್ಯವಿರುವಲ್ಲಿ ಕೆಲಸ ಮಾಡಬಹುದು" ಎಂದು ತಿಳಿಸಿದ್ದಾರೆ.