ಕಾಬೂಲ್, ಆ 18 (DaijiworldNews/PY): ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ಬಳಿಕ ಶಾಂತಿಯ ಭರವಸೆ ನೀಡಿತ್ತು. ಅಲ್ಲದೇ ಮಹಿಳೆಯ ಹಕ್ಕುಗಳನ್ನು ಗೌರವಿಸುವುದಾಗಿ ತಿಳಿಸಿತ್ತು. ಆದರೆ, ಶಾಂತಿ ಭರವಸೆಯ ಹೊರತಾಗಿಯೂ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳ ಮೇಲೆ ತಾಲಿಬಾನ್ ದಾಳಿ ನಡೆಸಿದೆ.
ದೇಶವನ್ನು ತೊರೆಯುವ ಪ್ರಯತ್ನದಲ್ಲಿ ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸುತ್ತಿರುವ ಮಕ್ಕಳು ಹಾಗೂ ಮಹಿಳೆಯ ಮೇಲೆ ತಾಲಿಬಾನ್ ಗುಂಡಿನ ದಾಳಿ ನಡೆಸಿದೆ. ವಿಮಾನ ನಿಲ್ದಾಣದಿಂದ ಜನಸಂದಣಿಯನ್ನು ಚದುರಿಸುವ ಸಲುವಾಗಿ ತಾಲಿಬಾನ್ ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ.
ಸುದ್ದಿಸಂಸ್ಥೆಯೊಂದರ ವರದಿಗಾರರೋರ್ವರು ಈ ಕುರಿತ ಫೋಟೋಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, "ಮಹಿಳೆ ಹಾಗೂ ಮಕ್ಕಳು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ" ಎಂದಿದ್ದಾರೆ.
"ವಿಮಾನ ನಿಲ್ದಾಣದಲ್ಲಿ ಹಿಜಬ್ ಇಲ್ಲದ ಮಹಿಳೆಯ ಮೇಲೆ ತಾಲಿಬಾನ್ ಹೋರಾಟಗಾರರು ಗುಂಡು ಹಾರಿಸಿದರು" ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.
ತಾಲಿಬಾನ್ಗಳು ಭಾನುವಾರ ಅಫ್ಗಾನಿಸ್ತಾದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಆ.31ರೊಳಗೆ ಅಫ್ಗಾನಿಸ್ತಾನದಿಂದ ಸಂಪೂರ್ಣ ಅಮೇರಿಕಾ ಸೇನೆಯನ್ನು ವಶಪಡಿಸಿಕೊಳ್ಳುವುದಾಗಿ ಜೋ ಬಿಡೆನ್ಗೆ ಸೂಚನೆ ನೀಡಿದ್ದರು. ಆದರೆ, ಇದಕ್ಕೆ ಇನ್ನೂ ಎರಡು ವಾರಗಳು ಇರುವ ಮುನ್ನವೇ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿದೆ.
ಕಾಬೂಲ್ ವಶಪಡಿಸಿಕೊಂಡ ಬಳಿಕ ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲಿಬಾನ್, "ಯಾವುದೇ ದೇಶಕ್ಕೆ ಯಾವುದೇ ರೀತಿಯಾದ ಬೆದರಿಕೆ ಒಡ್ಡುವುದಿಲ್ಲ" ಎಂದು ಹೇಳಿದೆ.
"ಅಫ್ಗನ್ ಜನರಿಗೆ ನಾವು ಸಂಪೂರ್ಣವಾಗಿ ಕ್ಷಮಾದಾನ ನೀಡಿದ್ದೇವೆ. ಸರ್ಕಾರದ ರಚನೆಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಅಫ್ಗಾನಿಸ್ತಾನದಲ್ಲಿ ಶೀಘ್ರದಲ್ಲಿ ಇಸ್ಲಾಮಿಕ್ ಸರ್ಕಾರ ಸ್ಥಾಪಿಸಲಾಗುವುದು" ಎಂದು ತಿಳಿಸಿದೆ.
"ಖಾಸಗಿ ಮಾಧ್ಯಮಗಳು ಇಲ್ಲಿ ಸ್ವತಂತ್ರವಾಗಿ ಕೆಲಸ ಮಾಡಬೇಕು. ದೇಶದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಮಹಿಳೆಯರು ಆರೋಗ್ಯ ಕ್ಷೇತ್ರ ಹಾಗೂ ಇತರೆ ಕ್ಷೇತ್ರಗಳಲ್ಲಿ ಅವರಿಗೆ ಅಗತ್ಯವಿರುವಲ್ಲಿ ಕೆಲಸ ಮಾಡಬಹುದು" ಎಂದು ಹೇಳಿದೆ.