ದುಬೈ, ಆ. 18 (DaijiworldNews/SM): ಅಫ್ಘಾನಿಸ್ತಾನವನ್ನು ತಾಲಿಬಾನರು ವಶಕ್ಕೆ ಪಡೆಯುತ್ತಿದ್ದಂತೆ ತಾಲಿಬಾನರ ಭೀತಿಯಿಂದ ಅಧ್ಯಕ್ಷ ಅಶ್ರಫ್ ಘನಿ ಪರಾರಿಯಾಗಿದ್ದರು. ಇದೀಗ ಯುಎಇಯಲ್ಲಿ ಘನಿ ಪತ್ತೆಯಾಗಿದ್ದಾರೆ.
ಸದ್ಯ ಮಾನವೀಯತೆಯ ನೆಲೆಯಲ್ಲಿ ಅಶ್ರಫ್ ಘನಿ ಅವರಿಗೆ ಯುಎಇ ಸರಕಾರ ಆಶ್ರಯ ನೀಡಿದೆ. ತಾಲಿಬಾನ್ ಆಕ್ರಮಣದ ಬಳಿಕ ಅಶ್ರಫ್ ಘನಿ ಅವರು ಅಫ್ಘಾನ್ ನಿಂದ ಪರಾರಿಯಾಗಿದ್ದರು. ಇದೀಗ ಯುಎಇಗೆ ತೆರಳಿರುವ ಕಾರಣದಿಂದಾಗಿ ಅಲ್ಲಿ ಮಾನವೀಯತೆಯ ದೃಷ್ಠಿಯಲ್ಲಿ ಅವರಿಗೆ ನೆಲೆ ನೀಡಲಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ.
ಈ ಬಗ್ಗೆ ಸ್ವತಃ ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯ ಮಾಹಿತಿ ನೀಡಿದೆ. ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ದೇಶಕ್ಕೆ ಸ್ವಾಗತಿಸಿರುವುದಾಗಿ ದೃಢೀಕರಿಸುತ್ತೇವೆ ಎಂಬುವುದಾಗಿ ಹೇಳಿಕೆ ನೀಡಿದೆ.
ಇನ್ನು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಶ್ರಫ್ ಕುಟುಂಬ ಸಹಿತವಾಗಿ ಅಫ್ಘಾನ್ ತೊರೆದಿದ್ದರು. ಅಲ್ಲದೆ, ರಕ್ತಪಾತ ತಪ್ಪಿಸಲು ದೇಶ ಬಿಟ್ತು ತೆರಳುವುದಾಗಿಯೂ ಅವರು ಹೇಳಿದ್ದರು.