ಕಾಬೂಲ್, ಆ 20 (DaijiworldNews/PY): ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾನಿಬಾನಿಗಳ ಅಟ್ಟಹಾಸ ಇನ್ನು ನಿಂತಿಲ್ಲ. ಈ ನಡುವೆ, ಭಾರತದ ರಾಜತಾಂತ್ರಿಕ ಕಚೇರಿಯಲ್ಲಿ ತಾಲಿಬಾನಿಗಳ ಹುಡುಕಾಟ ಆರಂಭವಾಗಿದೆ.
ಸದ್ಯ, ರಾಜತಾಂತ್ರಿಕ ಕಚೇರಿಯಲ್ಲಿರುವ ವಾಹನಗಳು ತಾಲಿಬಾನಿಗಳ ವಶದಲ್ಲಿದ್ದು, ಭಾರತದ ರಾಜತಾಂತ್ರಿಕ ಕಚೇರಿಯಲ್ಲಿ ಮಹತ್ವದ ದಾಖಲೆಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಹೆರತ್ ಹಾಗೂ ಕಂದಹಾರ್ನಲ್ಲಿರುವ ಎರಡು ರಾಜತಾಂತ್ರಿಕ ಕಚೇರಿಯಲ್ಲಿ ತಾಲಿಬಾನಿಗಳು ತೀವ್ರ ಶೋಧ ನಡೆಸಿದ್ದಾರೆ.
ಭಾರತದ 450 ಮಂದಿ ಇನ್ನು ಅಲ್ಲೇ ಇದ್ದು, ಅವರ ಸ್ಥಿತಿ ಅತಂತ್ರವಾಗಿದೆ. ಸರ್ಕಾರಕ್ಕೆ ಅವರನ್ನು ಕರೆತರಲು ಸವಾಲಾಗಿದೆ. ಅವರನ್ನು ಅಮೇರಿಕಾ ಹಾಗೂ ಇತರ ರಾಯಭಾರ ಕಚೇರಿಯ ಮೂಲಕ ಕರೆಸಿಕೊಳ್ಳುವಲ್ಲಿ ವಿದೇಶಾಂಗ ಸಚಿವಾಲಯ ಪ್ರಯತ್ನ ನಡೆಸಿದೆ.
ಅಫ್ಗಾನ್ನಲ್ಲಿರುವ ಭಾರತೀಯರನ್ನು ವಿಮಾನ ನಿಲ್ದಾಣದವರೆಗೆ ಕರೆತರುವುದು ತುಂಬಾ ಕಷ್ಟಕರವಾಗಿದೆ. ಬಂದೂಕುಧಾರಿ ತಾಲಿಬಾನಿಗಳು ಪ್ರತೀ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತದ ರಾಯಭಾರ ಕಚೇರಿ ಹತ್ತು ಕಿ.ಮೀ ದೂರ ಇದೆ. ಅಲ್ಲದೇ, ವಿಮಾನ ನಿಲ್ದಾಣದ ಸುತ್ತಮುತ್ತ ಅಮೇರಿಕಾ ಸೈನಿಕರ ಪಹರೆ ಇದೆ. ಹಾಗಾಗಿ ತಾನಿಬಾನಿಗಳ ಕಣ್ತಿಪ್ಪಿಸಿ ಬರುವುದು ಕಷ್ಟ. ಈ ನಡುವೆ, ತಾಲಿಬಾನ್ ವಿರುದ್ದ ಹೋರಾಡಿದ್ದ ಅಫ್ಗನ್ನ ಗುಪ್ತಚರ ಸಂಸ್ಥೆ ಎನ್ಡಿಎಸ್ ಸೈನಿಕರನ್ನು ತಾಲಿಬಾನಿಗಳು ಹುಡುಕುತ್ತಿದ್ದಾರೆ.