ವಾಷಿಂಗ್ಟನ್, ಆ 20 (DaijiworldNews/PY): ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಹಾಗೂ ಭಾರತದ ವಿದೇಶಾಂಗ ವ್ಯಹಹಾರಗಳ ಸಚಿವ ಎಸ್.ಜೈಶಂಕರ್ ಅವರು ಅಫ್ಗಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉಭಯ ರಾಷ್ಟ್ರಗಳ ಮಧ್ಯೆ ನಿಕಟವಾದ ಸಮನ್ವಯ ಮುಂದುವರಿಗೆ ಒಪ್ಪಿಗೆ ನೀಡಿದ್ದಾರೆ.
ಅಫ್ಗಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ, ಈ ವಾರದಲ್ಲಿ ಎರಡನೇ ಬಾರಿಗೆ ಉಭಯ ದೇಶಗಳ ನಾಯಕರು ಅಫ್ಗಾನ್ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮೇರಿಕಾ ಸರ್ಕಾರದ ವಕ್ತಾರ ನೆಡ್ ಪ್ರೈಸ್, ಬ್ಲಿಂಕನ್ ಹಾಗೂ ಜೈಶಂಕರ್ ಅವರು ದೂರವಾಣಿ ಮೂಲಕ ಅಫ್ಗಾನ್ನ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ.
ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ವಿಚಾರದ ಬಗ್ಗೆ ಜೈಶಂಕರ್ ಅವರು ಅಮೇರಿಕಾ ಹಾಗೂ ಮತ್ತಿತರ ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಚರ್ಚಿಸಿದ್ದಾರೆ.
ಕಳೆದ ಭಾನುವಾರ ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ತಮ್ಮ ಕೈವಶ ಮಾಡಿಕೊಂಡ ಬಳಿಕ, ಅಮೇರಿಕಾ ಹಾಗೂ ಮಿತ್ರ ರಾಷ್ಟ್ರಗಳು ಅಫ್ಗಾನಿಸ್ತಾನದಲ್ಲಿರುವ ತಮ್ಮ ದೇಶದ ಸಾವಿರಾರು ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮುಂದಾಗಿದ್ದು, ಈ ಕಾರಣದಿಂದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು.