ವಾಷಿಂಗ್ಟನ್, ಆ 21 (DaijiworldNews/PY): "ನಮ್ಮ ಯೋಧರ ಮೇಲೆ ದಾಳಿಯಾದ ಮರುಕ್ಷಣವೇ ನಾವು ಪ್ರತಿ ದಾಳಿ ಮಾಡುತ್ತೇವೆ" ಎಂದು ತಾಲಿಬಾನಿಗಳಿಗೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಸಿದ್ದಾರೆ.
ಶುಕ್ರವಾರ ತಡರಾತ್ರಿ ಅಫ್ಗಾನಿಸ್ತಾನ್ ವಿಷಯದ ಬಗ್ಗೆ ಮಾತನಾಡಿದ ಅವರು, "ಜಗತ್ತಿನಲ್ಲಿ ಇದು ಅತೀ ದೊಡ್ಡ ಸಮಸ್ಯೆಯಾಗಿದೆ. ಅಫ್ಗಾನ್ ನೆಲೆಯನ್ನು ಭಯೋತ್ಪಾದನೆಗೆ ಬಳಸಲು ಬಿಡುವುದಿಲ್ಲ" ಎಂದಿದ್ದಾರೆ.
"ಜುಲೈ ತಿಂಗಳಿನಿಂದ ಈವರೆಗೆ ನಾವು 18 ಸಾವಿರಕ್ಕೂ ಅಧಿಕ ಹಾಗೂ ಆಗಸ್ಟ್ 14ರ ಬಳಿಕ 13 ಸಾವಿರ ಜನರನ್ನು ಕಾಬೂಲ್ನಿಂದ ಸ್ಥಳಾಂತರ ಮಾಡಿದ್ದೇವೆ. ಜನರ ಏರ್ ಲಿಫ್ಟ್ ಕಾರ್ಯ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕಾಬೂಲ್ನಲ್ಲಿರುವ ಜನರ ಏರ್ಲಿಫ್ಟ್ ಮಾಡುವಲ್ಲಿ ಅಮೇರಿಕಾ ಸರ್ಕಾರ ಬದ್ಧವಾಗಿದೆ" ಎಂದು ಹೇಳಿದ್ದಾರೆ.
"ಅಫ್ಗಾನಿಸ್ತಾನದೊಂದಿಗೆ ನಾವು 20 ವರ್ಷ ಕೆಲಸ ಮಾಡಿದ್ದೇವೆ. ಕಾಬೂಲ್ನಲ್ಲಿ ಸದ್ಯ ಅಮೇರಿಕಾದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ತಾಲಿಬಾನಿಗಳು ಅಮೇರಿಕಾ ಸೇನೆಯ ಮೇಲೆ ದಾಳಿ ಮಾಡಿದ್ದಲ್ಲಿ, ಮರುಕ್ಷಣವೇ ನಾವು ಪ್ರತಿದಾಳಿ ನಡೆಸುತ್ತೇವೆ. ಮುಂದಿನ ವಾರದಲ್ಲಿ ಅಫ್ಗಾನಿಸ್ತಾನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ನಮ್ಮ ಸೈನಿಕರು ಸದ್ಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತೆ ನೀಡಿದ್ದು, ಜನರ ಏರ್ಲಿಫ್ಟ್ ಮಾಡಲು ಸಹಾಯ ಮಾಡುತ್ತಿದ್ದಾರೆ. ಅಮೇರಿಕಾ ಸೇರಿದಂತೆ ಬೇರೆ ದೇಶದ ಚಾರ್ಟರ್ ವಿಮಾನ ಹಾಗೂ ಜನರಿಗೆ ಅಮೇರಿಕಾ ಸೇನೆ ರಕ್ಷಣೆ ನೀಡುವ ಕಾರ್ಯವನ್ನು ಮಾಡುತ್ತಿವೆ" ಎಂದು ತಿಳಿಸಿದ್ದಾರೆ.