ಕಾಬೂಲ್, ಆ 21 (DaijiworldNews/PY): ಭಾರತೀಯ ವಾಯುಪಡೆ ವಿಮಾನ ಏರಲು ಸಜ್ಜಾಗಿದ್ದ 72 ಮಂದಿ ಅಫ್ಗನ್ ಸಿಖ್ಖರು ಹಾಗೂ ಅಫ್ಗನ್ ಹಿಂದೂಗಳನ್ನು ಶನಿವಾರ ತಾಲಿಬಾನ್ ತಡೆದಿದ್ದು, ಅವರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ವಾಪಾಸ್ಸು ಕಳುಹಿಸಲಾಯಿತು.
ಪ್ರಾತಿನಿಧಿಕ ಚಿತ್ರ
"ಅಫ್ಗಾನಿಸ್ತಾನ ಮೂಲದ 72 ಮಂದಿ ಸಿಖ್ಖರು ಹಾಗೂ ಹಿಂದೂಗಳ ತಂಡ ಭಾರತಕ್ಕೆ ಸ್ಥಳಾಂತರಗೊಳ್ಳುವ ನಿಟ್ಟಿನಲ್ಲಿ ವಿಮಾನ ಏರಲು ಸಿದ್ದವಾಗಿದ್ದರು. ಈ ವೇಳೆ ಅವರನ್ನು ತಾಲಿಬಾನಿಗಳು ತಡೆದು ನಿಲ್ಲಿಸಿದ್ದಾರೆ" ಎಂದು ವಿಶ್ವ ಪಂಜಾಬಿ ಸಂಘದ ಅಧ್ಯಕ್ಷ ವಿಕ್ರಂ ಜಿತ್ ಸಾಹ್ನಿ ಮಾಹಿತಿ ನೀಡಿದ್ದಾರೆ.
"ಈ 72 ಮಂದಿ 85 ಮಂದಿಯನ್ನು ಭಾರತಕ್ಕೆ ಹೊತ್ತೊಯ್ದ ವಾಯಪಡೆ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು" ಎಂದು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಸಿ-130 ಜೆ ವಿಮಾನವು ಶನಿವಾರ ಕಾಬೂಲ್ನಿಂದ 85 ಮಂದಿಯನ್ನು ಹೊತ್ತೊಯ್ದಿದೆ.
ಭಾರತೀಯ ನಾಗರಿಕರನ್ನು ಸರ್ಕಾರ ಸಂಘಟಿಯ ಪ್ರಯತ್ನದೊಂದಿಗೆ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಎರಡು ವಿಮಾನಗಳು ಅಮೇರಿಕಾ ಭದ್ರತಾ ಪಡೆಗಳಿಂದ ಕ್ಲಿಯರೆನ್ಸ್ ಪಡೆದುಕೊಂಡು ಕೆಲವು ಪತ್ರಕರ್ತರು ಸೇರಿದಂತೆ ಐಟಿಬಿಪಿ ಸಿಬ್ಬಂದಿಗಳು ಹಾಗೂ 180 ಅಧಿಕಾರಿಗಳನ್ನು ಭಾರತಕ್ಕೆ ವಾಪಾಸ್ಸು ಕರೆತಂದಿದ್ದವು.