ಅಲಬಾಮ, ಆ 22 (DaijiworldNews/PY): "ಅಫ್ಗಾನ್ನಲ್ಲಿನ ಬೆಳವಣಿಗೆಗಳು ಅಮೇರಿಕಾದ ವಿದೇಶಾಂಗ ನೀತಿಯ ದೊಡ್ಡ ವೈಫಲ್ಯ" ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇವ್ ಅಮೇರಿಕಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಅಫ್ಗಾನ್ನ ಪರಿಸ್ಥಿತಿ ಅತಿ ದೊಡ್ಡ ಮುಜುಗರ ಹಾಗೂ ಅಮೇರಿಕಾದ ಇತಿಹಾಸದಲ್ಲೇ ವಿದೇಶಾಂಗ ನೀತಿಗೆ ಉಂಟಾದ ದೊಡ್ಡ ಅವಮಾನ" ಎಂದು ಟೀಕಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಅಫ್ಗಾನ್ನಲ್ಲಿರುವ ಸೇನಾ ನೆಲೆಗಳನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಬಿಟ್ಟುಕೊಟ್ಟಿದ್ದಾರೆ. ಅಮೇರಿಕಾ ಸೇನೆಯು 83 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಉಪಕರಣಗಳನ್ನು ಬಿಟ್ಟು ಹೊರನಡೆದಿದ್ದಾರೆ" ಎಂದಿದ್ದಾರೆ.
"ಸೇನೆಯನ್ನು ಹಿಂಪಡೆಯುತ್ತಿರುವುದು ಸಂಪೂರ್ಣ ಶರಣಾಗತಿ ಹಾಗೂ ದೇಶದ ನಾಯಕನ ಅಸಮರ್ಥತೆ. ಸೇನೆಯ ಸಾರ್ವಕಾಲಿಕ ಸೋಲುಗಳಲ್ಲಿ ಇದು ಒಂದಾಗಿದೆ" ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಈ ವರ್ಷದ ಮೇ 1ರೊಳಗೆ ಸಂಪೂರ್ಣ ಸೇನೆಯನ್ನು ಅಫ್ಗಾನಿಸ್ತಾನದಿಂದ ಹಿಂಪಡೆಯಲಾಗುವುದು ಎಂದು ಹಿಂದಿನ ಟ್ರಂಪ್ ಸರ್ಕಾರ ಗಡುವು ನಿಗದಿ ಮಾಡಿತ್ತು. ಟ್ರಂಪ್ ಕರ್ಸರ ನಿಗದಿ ಮಾಡಿದ್ದ ಗಡುವನ್ನು ಸೆ.1ರವರೆಗೆ ವಿಸ್ತರಿಸಿದ್ದ ಜೋ ಬಿಡೆನ್ ಆಗಸ್ಟ್ 31ರೊಳಗೆ ಸಂಪೂರ್ಣ ಸೇನೆಯನ್ನು ವಾಪಾಸ್ಸು ಕರೆಸಿಕೊಳ್ಳುವುದಾಗಿ ಹೇಳಿದ್ದರು.