ಕಾಬೂಲ್, ಆ 23(DaijiworldNews/MS): ಬಹುಕಾಲದಿಂದಲೂ ತಾಲಿಬಾನ್ ವಿರೋಧಿ ಭದ್ರಕೋಟೆ ಎಂದು ಹೆಸರುವಾಸಿಯಾಗಿರುವ ಪಂಜ್ಶಿರ್ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ನೂರಾರು ತಾಲಿಬಾನಿಗರು ಹೋಗುತ್ತಿರುವುದಾಗಿ ತಾಲಿಬಾನ್ ಘೋಷಿಸಿಕೊಂಡಿದೆ.
ಆಪ್ಘನ್ ರಾಜಧಾನಿ ಕಾಬೂಲ್ನಿಂದ ಉತ್ತರಕ್ಕಿರುವ ಪಂಜ್ ಶೀರ್ ಕಣಿವೆಯನ್ನು ತಾಲಿಬಾನ್ ಉಗ್ರರಿಗೆ ಬಿಟ್ಟುಕೊಡಲು ಅಲ್ಲಿನ ಮಾಜಿ ಸರ್ಕಾರಿ ಸೇನಾಪಡೆ ಹಾಗೂ ಅಲ್ಲಿನ ಬುಡಕಟ್ಟು ಸೇರಿ ಇತರೆ ಹೋರಾಟಗಾರರು ಒಪ್ಪುತ್ತಿಲ್ಲ. ಹೀಗಾಗಿ ಪಂಜ್ಶಿರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ತಾಲಿಬಾನ್ ತನ್ನ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಪಂಜಶಿರ್ ಪ್ರಾಂತ್ಯಕ್ಕೆ ಕಳುಹಿಸಿದ್ದು, ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗಿದೆ.
ಸ್ಥಳೀಯ ರಾಜ್ಯ ಅಧಿಕಾರಿಗಳು ಅದನ್ನು ಶಾಂತಿಯುತವಾಗಿ ಹಸ್ತಾಂತರಿಸಲು ನಿರಾಕರಿಸಿದ ನಂತರ, ಇಸ್ಲಾಮಿಕ್ ಎಮಿರೇಟ್ನ ನೂರಾರು ಮುಜಾಹಿದ್ದೀನ್ ಗಳು ಪಂಜ್ಶಿರ್ ಪ್ರದೇಶದತ್ತ ಸಾಗುತ್ತಿದ್ದಾರೆ ಎಂದು ತಾಲಿಬಾನ್ ತನ್ನ ಅರೆಬಿಕ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಅಪ್ಘಾನಿಸ್ತಾನದ ಜನಪ್ರಿಯ ಮುಜಾಹಿದ್ದೀನ್ ಕಮಾಂಡರ್ ಅಹ್ಮದ್ ಶಾ ಮಸೂದ್ ಪುತ್ರ ಅಹ್ಮದ್ ಮಸೂದ್ ತಾಲಿಬಾನ್ ವಿರೋಧಿ ಹೋರಾಟ ನಡೆಸುತ್ತಿದ್ದಾರೆ.