ವಾಷಿಂಗ್ಟನ್, ಆ 26 (DaijiworldNews/PY): "ತಾಲಿಬಾನ್, ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶ ಹಾಗೂ ನಿಯಂತ್ರಣದ ಮೇಲೆ ಹಿಡಿತ ಸಾಧಿಸುತ್ತಿದೆ" ಎಂದು ಅಮೇರಿಕಾದ ಭದ್ರತಾ ಪ್ರಧಾನ ಕಚೇರಿ ಪೆಂಟಗನ್ ತಿಳಿಸಿದೆ.
"ಚೆಕ್ಪೋಸ್ಟ್ಗಳಲ್ಲಿ ತಾಲಿಬಾನ್ಗಳು ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದು, ನಿನ್ನೆಗಿಂತ ಎರಡು ಪಟ್ಟು ಭದ್ರತಾ ಸಿಬ್ಬಂದಿಗಳು ಹೆಚ್ಚಾಗಿದ್ದಾರೆ. ವಿಮಾನ ನಿಲ್ದಾಳ ಸೇರಿದಂತೆ ನಗರದಲ್ಲಿ ಹಿಡಿತ ಸಾಧಿಸುವುದು ಅವರ ಸ್ಪಷ್ಟ ಉದ್ದೇಶವಾಗಿದೆ" ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿದ್ದಾರೆ.
"ಆಗಸ್ಟ್ 31ರ ಬಳಿಕ ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡುವುದು ಅಮೇರಿಕದಾ ಜವಾಬ್ದಾರಿಯಲ್ಲ. ಪ್ರಸ್ತುತ ಅಮೇರಿಕಾದ ರಾಯಭಾರ ಕಚೇರಿಯು ಕಾಬೂಲ್ ವಿಮಾನ ನಿಲ್ದಾಣದಿಂದ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ನಂತರ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡುವ ಹೊಣೆ ತಾಲಿಬಾನ್ಗೆ ಸೇರಿದ್ದಾಗಿದೆ" ಎಂದು ತಿಳಿಸಿದ್ದಾರೆ.
ಈ ನಡುವೆ ಭಾರತದ ವೀಸಾ, ಅಫ್ಗಾನಿಸ್ತಾನ ನಾಗರಿಕ ಪಾಸ್ ಪೋರ್ಟ್ ಕಳುವಾಗಿರುವ ಘಟನೆ ನಡೆದಿದೆ.
ಖಾಸಗಿ ಟ್ರಾವೆಲ್ ಏಜೆನ್ಸಿ ಮೇಲೆ ದಾಳಿ ನಡೆಸಿರುವ ತಾಲಿಬಾನಿಗಳು ಪಾರ್ಸ್ ಪೋರ್ಟ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆ.15 ಹಾಗೂ 16ರಂದು ಭಾರತದ ವೀಸಾ ಕಳ್ಳತನವಾಗಿದ್ದು, ಈ ವಿಚಾರ ತಡವಾಗಿ ತಿಳಿದುಬಂದಿದೆ. ಕಳ್ಳತನವಾಗಿರುವ ಭಾರತದ ವೀಸಾವನ್ನು ಪಾಕಿಸ್ತಾನದ ಉಗ್ರರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆ ಕೇಂದ್ರದ ಗೃಹ ಇಲಾಖೆ ನೀಡಿದ್ದ ವೀಸಾವನ್ನು ರದ್ದು ಮಾಡಿದೆ.
ಈಗಾಗಲೇ ಭಾರತದ ಇ-ವೀಸಾ ಕೋರಿ ಅಫ್ಗಾನಿಸ್ತಾನದ ನಾಗರಿಕರು ಸುಮಾರು 15 ಸಾವಿರ ಅರ್ಜಿ ಸಲ್ಲಿಸಿದ್ದರು. ಸದ್ಯ, ಹೊಸದಾಗಿ ಇ-ವೀಸಾ ಪಡೆಯಲು ಅಫ್ಗಾನಿಸ್ತಾನದ ನಾಗರಿಕರಿಗೆ ಸೂಚಿಸಲಾಗಿದೆ.
ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯು ಜನಜೀವನವನ್ನು ಅಸ್ಯವ್ಯಸ್ತಗೊಳಿಸಿದೆ. ಈ ನಡುವೆ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಆಹಾರ ಹಾಗೂ ಪಾನೀಯದ ಬೆಲೆ ಗಗನಕ್ಕೇರಿದೆ. ಈ ಕಾರಣದಿಂದ ಪ್ರತಿಯೋರ್ವ ವ್ಯಕ್ತಿ ಆಹಾರ ಹಾಗೂ ನೀರಿಗೆ ಕಷ್ಟಪಡುವಂತಾಗಿದೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನೀರಿನ ಬಾಟಲಿಯ ಬೆಲೆ 40 ಡಾಲರ್ ತಲುಪಿದ್ದು, ಸುಮಾರು 3000 ರೂ. ಆಗಿದೆ. ಒಂದು ಪ್ಲೇಟ್ ಅನ್ನದ ಬೆಲೆ 100 ಡಾಲರ್ ಏರಿದೆ. ಅಂದ್ರೆ ಸುಮಾರು 7500 ರೂ. ನೀಡಬೇಕಾಗಿದೆ.