ವಾಷಿಂಗ್ಟನ್, ಆ 26 (DaijiworldNews/PY): "ತಾಲಿಬಾನ್ ಪರ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಅವರು ಮೃದುಧೋರಣೆ ಹೊಂದಿದ್ದು, ಅಮೇರಿಕಾದ ಮಿತ್ರರಾಷ್ಟ್ರಗಳಿಗೆ ವಿರುದ್ದವಾಗಿದ್ದಾರೆ" ಎಂದು ಅಫ್ಗಾನಿಸ್ತಾನದ ಬಗ್ಗೆ ಅಮೇರಿಕಾದ ನೀತಿಯನ್ನು ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಕ್ಕಾರ್ತಿ ಅವರು ಟೀಕಿಸಿದ್ದಾರೆ.
ಕ್ಯಾಪಿಟಲ್ ಹಿಲ್ಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಧ್ಯಕ್ಷರು, ಅಫ್ಗಾನಿಸ್ತಾನದ ವಿಚಾರದಲ್ಲಿ ಕೈಗೊಂಡ ತಪ್ಪು ತೀರ್ಮಾನಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಅಪಾಯ ಸೃಷ್ಟಿಸಲು ಕಾರಣವಾಗುತ್ತಿದೆ" ಎಂದಿದ್ದಾರೆ.
"ನಾವು ಬಹಳ ವರ್ಷಗಳಿಂದ ಮಿತ್ರರಾಷ್ಟ್ರಗಳ ಜೊತೆ ಹೋರಾಡುತ್ತಿದ್ದೇವೆ. ಆದರೆ, ಜೋ ಬಿಡೆನ್ ಅವರು ತಾಲಿಬಾನ್ ಪರವಾಗಿದ್ದು, ಮಿತ್ರರಾಷ್ಟ್ರಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಹಿಂದಿನ ಯಾವ ಆಡಳಿದಲ್ಲಿಯೂ ಕೂಡಾ ಈ ರೀತಿ ಆಗಿರಲಿಲ್ಲ. ವಿದೇಶಾಂಗ ನೀತಿ ವಿಫಲವಾಗಿದ್ದನ್ನು ನಾನು ನನ್ನು ಜೀವನದಲ್ಲೇ ಕಂಡಿಲ್ಲ. ನಮ್ಮ ದೇಶದ ಮೇಲೆ ಇದು ದೀರ್ಘಾವಧಿಯಲ್ಲಿಯೂ ಬಹಳಷ್ಟು ಹಾನಿ ಮಾಡಲಿದೆ" ಎಂದು ಹೇಳಿದ್ದಾರೆ.
"ಅಫ್ಗಾನ್ನಿಂದ ಅಮೇರಿಕಾ ಹಾಗೂ ಮಿತ್ರರಾಷ್ಟ್ರಗಳ ನಾಗರಿಕ ತೆರವುಗೊಳಿಸುವ ವಿಚಾರದಲ್ಲಿ ನಮ್ಮನ್ನು ನಮ್ಮ ಮಿತ್ರರಾಷ್ಟ್ರಗಳೇ ಟೀಕೆ ಮಾಡುವಂತಾಗಿದೆ. ಅಫ್ಗಾನ್ನಲ್ಲಿರುವ ನಮ್ಮ ಜನರನ್ನು ಕರೆತರಲು ಈ ವಿಧಿಸಿರುವ ಗಡುವನ್ನು ವಿಸ್ತರಿಸುವಂತೆ ಅಮೇರಿಕಾವನ್ನು ಮಿತ್ರ ರಾಷ್ಟ್ರಗಳು ಕೇಳುತ್ತಿವೆ. ಅವರು ಕೇಳುತ್ತಿರುವುದು ತಮ್ಮ ನಾಗರಿಕರನ್ನು ಕರೆತರಲು. ಬದಲಾಗಿ ಬೇರೆ ಯಾವುದಕ್ಕೂ ಅಲ್ಲ" ಎಂದಿದ್ದಾರೆ.