ಕಾಬೂಲ್, ಆ. 26 (DaijiworldNews/SM): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ರಾತ್ರಿ ಅಟ್ಟಹಾಸ ಮೆರೆದಿದ್ದು ರಕ್ತಪಾತ ನಡೆಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ನಿಲ್ದಾಣದ ಹೊರಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ ಆಗಸ್ಟ್ 31ರ ತನಕ ಉಗ್ರರು ಗಡುವು ನೀಡಿದ್ದರು. ಅಮೆರಿಕಾ, ಬ್ರಿಟನ್ ಸೇರಿದಂತೆ ಇನ್ನಿತರ ರಾಷ್ಟ್ರಗಳಿಗೆ ತಾಲಿಬಾನ್ ಎಚ್ಚರಿಕೆ ನೀಡಿತ್ತು. ಇನ್ನು ಗಡುವು ಮುಗಿಯುವುದರೊಳಗಾಗಿ ಕಾಬೂಲ್ ನ ಎರಡು ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ. ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶ ದ್ವಾರ ಬಳಿ ಸ್ಪೋಟಗೊಂಡಿದ್ದು, ಇಟಲಿ ವಿಮಾನವನ್ನು ಗುರಿಯಾಗಿಸಿ ಸ್ಪೋಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನ್ನು 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.