ದುಬೈ, ಆ 27 (DaijiworldNews/PY): ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ನ ಖುರಾಸನ್ ಘಟಕ ಹೊತ್ತುಕೊಂಡಿದೆ.
"ಇಬ್ಬರು ಆತ್ಮಾಹುತಿ ಬಾಂಬರ್ಗಳು ಹಾಗೂ ಬಂದೂಕುಧಾರಿಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಜನರ ಮೇಲೆ ಗುರುವಾರ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 60 ಅಫ್ಗನ್ನರು ಹಾಗೂ ಅಮೇರಿಕಾ ಸೇನೆಯ 13 ಮಂದಿ ಸಾವನ್ನಪ್ಪಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮೇರಿಕಾ ಸೇನೆ ಹಾಗೂ ಅಫ್ಗನ್ ಮಿತ್ರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಈ ದಾಳಿಯ ಸಂಪೂರ್ಣ ಹೊಣೆ ಹೊತ್ತಿರುವ ಇಸ್ಲಾಮಿಕ್ ಸ್ಟೇಟ್-ಖುರಾಸನ್ ಸಂಘಟನೆ ತಿಳಿಸಿದೆ.
ಈ ಹೇಳಿಕೆಯೊಂದಿಗೆ ಐಎಸ್-ಖುರಾಸನ್ ಸಂಘಟನೆಯು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಬಾಂಬರ್ನ ಫೋಟೋವನ್ನು ಕೂಡಾ ಬಿಡುಗಡೆ ಮಾಡಿದೆ. ಈ ಫೋಟೋದಲ್ಲಿ ಬಾಂಬರ್ ಸ್ಪೋಟಕಗಳನ್ನು ಒಳಗೊಂಡ ಬೆಲ್ಟ್ ಅನ್ನು ಧರಿಸಿ ಐಎಸ್ನ ಕಪ್ಪು ಬಾವುಟದ ಮುಂದೆ ನಿಂತಿರುವುದನ್ನು ಕಾಣಬಹುದಾಗಿದೆ. ಈ ಫೋಟೋದಲ್ಲಿ ತನ್ನ ಮುಖವನ್ನು ಉಗ್ರ ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡಿದ್ದಾನೆ. ಆದರೆ, ಇನ್ನೋರ್ವ ಬಾಂಬರ್ ಹಾಗೂ ಬಂದೂಕುಧಾರಿಗಳ ಕುರಿತು ಐಎಸ್-ಖುರಾಸನ್ ಉಲ್ಲೇಖಿಸಿಲ್ಲ.
"ಅಮೇರಿಕಾ ಸೇನೆ ಹಾಗೂ ಇತರರು ಇದ್ದ ಸ್ಥಳದಿಂದ ಐದು ಮೀಟರ್ ದೂರದಲ್ಲಿದ್ದ ತಾಲಿಬಾನ್ ಚೆಕ್ಪೋಸ್ಟ್ ಅನ್ನು ಬಾಂಬರ್ ಸುಲಭವಾಗಿ ದಾಟಿದ್ದಾನೆ. ಕೆಲವು ತಾಲಿಬಾನ್ಗಳು ಈ ದಾಳಿಯ ಸಂದರ್ಭ ಸಾವನ್ನಪ್ಪಿದ್ದಾರೆ" ಎಂದು ಐಎಸ್-ಖುರಾಸನ್ ತಿಳಿಸಿದೆ.
"ಅಮೇರಿಕಾ ಸೇನೆಯು, ತಾವು ದಾಳಿ ಮಾಡಿದ್ದ ಪ್ರದೇಶದಲ್ಲಿ ತನ್ನ ಪಡೆಯ ಜೊತೆ ಕೆಲಸ ಮಾಡಿದ ವ್ಯಕ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದರು" ಎಂದಿದೆ.