ಕಾಬೂಲ್, ಆ 28 (DaijiworldNews/PY): ಅಮೇರಿಕಾ ನೇತೃತ್ವದ ತೆರವು ಕಾರ್ಯಾಚರಣೆಯ ಗಡುವು ಹತ್ತಿರ ಬರುತ್ತಿದ್ದಂತೆ ಅಫ್ಗಾನ್ನಲ್ಲಿ ಇನ್ನೊಂದು ದಾಳಿಯ ಅಪಾಯ ಹೆಚ್ಚಿದೆ. ಅಮೇರಿಕಾವು, ದಾಳಿ ಭೀತಿ ಹಾಗೂ ಬಿಗಿ ಭದ್ರತೆಯ ಮಧ್ಯೆ ತನ್ನ ನೆರವು ಕಾರ್ಯಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಇದರ ನಡುವೆ ಆತ್ಮಾಹುತಿ ದಾಳಿ ನಡೆಸಿದ ಸಂಘಟನೆಯ ಸದಸ್ಯನೋರ್ವನನ್ನು ಅಮೇರಿಕಾ ಹತ್ಯೆ ಮಾಡಿರುವುದಾಗಿ ಪ್ರತಿಪಾದಿಸಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಪೂರ್ವ ಅಫ್ಗಾನಿಸ್ತಾನದಲ್ಲಿ ಅಮೇರಿಕಾ ಸೇನೆಯು ಡ್ರೋನ್ ದಾಳಿ ನಡೆಸಿದ್ದು, ಇಸ್ಲಾಮಿಕ್ ಸ್ಟೇಟ್ನ ಅಫ್ಗನ್ ಘಟಕದ ಸದಸ್ಯನೋರ್ವನನ್ನು ಹತ್ಯೆ ಮಾಡಿದೆ ಎಂದು ಅಮೇರಿಕಾದ ಕೇಂದ್ರ ಕಮಾಂಡರ್ ಹೇಳಿದ್ದಾರೆ.
ಕಾಬೂಲ್ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸಾವನ್ನಪ್ಪಿದ್ದ ಅಫ್ಗನ್ನರ ಸಂಖ್ಯೆ 169ಕ್ಕೆ ಏರಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ, ಈ ದಾಳಿಯಲ್ಲಿ ಅಮೇರಿಕಾ ಸೇನೆಯ 13 ಮಂದಿ ಸಾವನ್ನಪ್ಪಿದ್ದಾರೆ.
"ಅಮೇರಿಕಾ ನೇತೃತ್ವದ ತೆರವು ಕಾರ್ಯಾಚರಣೆಯ ಗಡುವು ಹತ್ತಿರ ಬರುತ್ತಿದ್ದಂತೆ ದಾಳಿಯ ಅಪಾಯ ಹೆಚ್ಚಿದೆ. ಉಗ್ರಸಂಘಟನೆಗಳು ಅಫ್ಗಾನಿಸ್ತಾನದಲ್ಲಿ ಮತ್ತಷ್ಟು ದಾಳಿ ನಡೆಸಬಹುದು" ಎಂದು ಶ್ವೇತಭವನ ಹಾಗೂ ಪೆಂಟಗನ್ ಎಚ್ಚರಿಸಿದೆ.
ಅಫ್ಗಾನ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಅಮೇರಿಕಾ ಸೂಚನೆ ನೀಡಿದೆ.
"ತೆರವು ಕಾರ್ಯಾಚರಣೆಗೆ ಮುಂದಿನ ಕೆಲವು ದಿನಗಳು ಅಪಾಯಕಾರಿಯಾಗಿದೆ" ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಮಾಹಿತಿ ನೀಡಿದ್ದಾರೆ.