ಕಾಬೂಲ್, ಆ 30 (DaijiworldNews/MS): ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಸಂಘಟನೆ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಅಫ್ಘಾನಿಸ್ತಾನದ ವಿಶ್ವವಿದ್ಯಾಲಯಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ನೀಡಲಾಗುವುದು ಎಂದರೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಂದೇ ತರಗತಿಯಲ್ಲಿ ಅಧ್ಯಯನ ಮಾಡಲು ನಿರ್ಬಂಧಿಸಿದ್ದು ಸಹ-ಶಿಕ್ಷಣಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಶರಿಯಾ ಕಾನೂನಿನ ಪ್ರಕಾರ, ಸಹ ಶಿಕ್ಷಣದ ಹೊರತಾದ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರಿಸಬಹುದು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ತರಗತಿಗಳಲ್ಲಿ ಕಲಿಸಲಾಗುವುದು ಎಂದು ಶಿಕ್ಷಣ ಇಲಾಖೆಯನ್ನು ನೋಡಿಕೊಳ್ಳುವ ಸಿಯಾರ್ ಖಾನ್ ಯಾದ್ ಹೇಳಿದ್ದಾರೆ
ಇಸ್ಲಾಮಿಕ್ ರಾಷ್ಟ್ರೀಯ ಹಾಗೂ ಐತಿಹಾಸಿಕ ಮೌಲ್ಯಗಳ ಆಧಾರದ ಮೇಲೆ ಇಸ್ಲಾಮಿಕ್ ಪಠ್ಯಕ್ರಮವನ್ನು ಸೃಷ್ಟಿಸಲಿದ್ದೇವೆ. ಪ್ರಾಥಮಿಕ ಶಾಲಾ ಹಂತದಿಂದಲೇ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳನ್ನು ಪ್ರತ್ಯೇಕವಾಗಿಟ್ಟು ಶಿಕ್ಷಣ ಒದಗಿಸಲಾಗುವುದು ಎಂದಿರುವ ತಾಲಿಬಾನ್, ಮಹಿಳಾ ಹಕ್ಕುಗಳನ್ನೂ ಸಹ ಇಸ್ಲಾಮಿಕ್ ಕಾನೂನಿನ ಅನ್ವಯದಲ್ಲೇ ಅರ್ಥೈಸಲಾಗುವುದು ಎಂದು ಹೇಳಿದ್ದಾರೆ.
ಪಾಶ್ಚಾತ್ಯ ಪಡೆಗಳು ಬೆಂಬಲಿಸಿದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಗದ್ದುಗೆಗೆ ಏರಿದ ತಾಲಿಬಾನ್ ಸಕ್ರಿಯವಾಗಿ ಹೊಸ ಸಚಿವ ಸಂಪುಟವನ್ನು ರಚಿಸಲು ಪ್ರಯತ್ನಿಸುತ್ತಿದೆ. ಆರೋಗ್ಯ, ಶಿಕ್ಷಣ, ಅರ್ಥಶಾಸ್ತ್ರ ಸೇರಿದಂತೆ ಪ್ರಮುಖ ಇಲಾಖೆಗಳ ನಿರ್ವಹಣೆ ಮಾಡುವ ಅಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ