ಕಾಬೂಲ್, ಆ.31 (DaijiworldNews/HR): ಅಫ್ಘಾನಿಸ್ತಾನದಿಂದ ಮಂಗಳವಾರದಂದು ಅಮೇರಿಕಾವು ತನ್ನ ಎಲ್ಲಾ ಸೇನಾ ಪಡೆಗಳನ್ನು ಹಿಂತೆಗೆದುಕೊಂಡಿದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಿಡೆನ್, "ಆಫ್ಘಾನಿಸ್ತಾನದಲ್ಲಿ ನಮ್ಮ 20 ವರ್ಷಗಳ ಮಿಲಿಟರಿ ಉಪಸ್ಥಿತಿ ಕೊನೆಗೊಂಡಿದ್ದು, ಯೋಜಿಸಿದಂತೆ ನಮ್ಮ ಏರ್ ಲಿಫ್ಟ್ ಕಾರ್ಯಾಚರಣೆಯನ್ನು ಕೊನೆಗಾಣಿಸುವುದು ಜಂಟಿ ಮುಖ್ಯಸ್ಥರು ಮತ್ತು ನಮ್ಮ ಎಲ್ಲಾ ಕಮಾಂಡರ್ ಗಳ ಒಮ್ಮತದ ಶಿಫಾರಸು ಎಂದು ಸದ್ಯಕ್ಕೆ ನಾನು ವರದಿ ಮಾಡುತ್ತೇನೆ. ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸುವುದು ನಮ್ಮ ಪಡೆಗಳ ಜೀವಗಳನ್ನು ರಕ್ಷಿಸಲು ಮತ್ತು ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಆಫ್ಘಾನಿಸ್ತಾನವನ್ನು ತೊರೆಯಲು ಬಯಸುವವರಿಗೆ ನಾಗರಿಕ ನಿರ್ಗಮನದ ಸಾಧ್ಯತೆಗಳನ್ನು ಭದ್ರಪಡಿಸಲು ಉತ್ತಮ ಮಾರ್ಗವಾಗಿದೆ" ಎಂದಿದ್ದಾರೆ.
ಇನ್ನು ತಾಲಿಬಾನ್ ಉಗ್ರರು ನೀಡಿದ್ದ ಗಡುವಿಗಿಂತ 24 ತಾಸು ಮುಂಚಿತವಾಗಿ ಅಮೆರಿಕಾ ಸೇನೆ ಕಾಬೂಲ್ ಏರ್ಪೋರ್ಟ್ನಿಂದ ತೆರಳಿದ್ದು, ನಿನ್ನೆ ರಾತ್ರಿ ಅಮೆರಿಕದ 3 ವಿಮಾನಗಳಲ್ಲಿ ಯೋಧರನ್ನು ಶಿಫ್ಟ್ ಮಾಡಲಾಗಿದೆ. ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.