ವಾಷಿಂಗ್ಟನ್, ಸೆ 2 (DaijiworldNews/MS): ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು, ಒಂದು ಕಾಲದಲ್ಲಿ ಅಮೆರಿಕದ ನಿಯಂತ್ರಣದಲ್ಲಿದ್ದ ಅಫ್ಘಾನಿಸ್ತಾನದ ಬಾಗ್ರಾಮ್ ವಾಯುಪಡೆ ನೆಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಚೀನಾ ಮುಂದಾಗಬಹುದು ಎಂದು ಹೇಳಿದ್ದಾರೆ.
ತಾಲಿಬಾನ್ ವಶದಲ್ಲಿರುವ ಬಾಗ್ರಂ ವಾಯುನೆಲೆಯನ್ನು ಚೀನಾ ತನ್ನ ಸುಪರ್ದಿಗೆ ಪಡೆದುಕೊಳ್ಳಲು ಸಂಚು ನಡೆಸಿದೆ ಭಾರತದ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಚೀನಾ ಬಾಗ್ರಂ ವಾಯುನೆಲೆಯ ಮೇಲೆ ಕಣ್ಣಿಟ್ಟಿದೆ. ಅಲ್ಲದೆ ಪಾಕಿಸ್ತಾನವನ್ನು ಭಾರತ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿದೆ. ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಗೆಡವಿದ್ದಾರೆ.
ತಾಲಿಬಾನ್ ಒಡ್ಡುತ್ತಿರುವ ಸವಾಲುಗಳನ್ನು ಯುಎಸ್ ಹೇಗೆ ಎದುರಿಸಬೇಕೆಂದು ವಿವರಿಸಿದ ನಿಕ್ಕಿ ಹ್ಯಾಲೆ, ಸೈಬರ್ ಕ್ರೈಂ ಗೆ ಯುಎಸ್ ಸಿದ್ಧರಾಗಿರಬೇಕು ಮತ್ತು ಮಿತ್ರರಾಷ್ಟ್ರಗಳೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸಬೇಕು ಎಂದು ಹೇಳಿದರು.
ಅಫ್ಗಾನಿಸ್ತಾನ ತಾಲಿಬಾನ್ ವಶವಾಗಿರುವುದನ್ನು ಜಿಹಾದಿ ಉಗ್ರರು ಸಂಭಮಿಸುತ್ತಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜಗತ್ತಿನಾದ್ಯಂತ ಉಗ್ರಸಂಘಟನೆಗಳು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವ ಆತಂಕವನ್ನು ನಿಕ್ಕಿ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಯುಎಸ್ ವಾಪಸಾತಿ ಕುರಿತು ಅಧ್ಯಕ್ಷ ಜೋ ಬಿಡೆನ್ ಅವರನ್ನು ತೀವ್ರವಾಗಿ ಟೀಕಿಸಿರುವ ನಿಕ್ಕಿ ಹ್ಯಾಲೆ, ಆಡಳಿತವು ತನ್ನ ಮಿತ್ರರಾಷ್ಟ್ರಗಳಾದ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ಬೆಂಬಲಕ್ಕೆ ನಿಲ್ಲಬೇಕು ಎಂದು ನಿಕ್ಕಿ ಹಾಲೆ ಪ್ರತಿಪಾದಿಸಿದ್ದಾರೆ.