ಅಮೇರಿಕಾ, ಸೆ. 03 (DaijiworldNews/PY): ಅಮೇರಿಕಾ ನ್ಯೂಯಾರ್ಕ್ ನಗರದಲ್ಲಿ ಅಪ್ಪಳಿಸಿದ ಇಡಾ ಚಂಡಮಾರುತದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹದಿಂದ 41 ಜನ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೊದಲು ಕ್ಯೂಬಾ ದೇಶವನ್ನು ಆವರಿಸಿದ್ದ ಈಡಾ ಚಂಡಮಾರುತ, ಬಳಿಕ ಅಮೇರಿಕಾದ ಲೂಸಿಯಾನ ರಾಜ್ಯಕ್ಕೂ ಅಪ್ಪಳಿಸಿದ್ದು, ಸಾವಿರಾರು ಕಟ್ಟಡಗಳು ಹಾನಿಯಾಗಿವೆ. ನೂರಾರು ಮರಗಳು ಧರೆಗುರುಳಿವೆ. ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಜನತೆ ಕತ್ತಲಲ್ಲಿ ವಾಸಿಸುತ್ತಿದ್ದಾರೆ. ಇಡಾ ಚಂಡಮಾರುತದ ಪರಿಣಾಮ ಹಲವೆಡೆ ಸುಂಟರಗಾಳಿ ಕಾಣಿಸಿಕೊಂಡಿದೆ. ಪ್ರವಾಹ ಹೆಚ್ಚಾಗಿದ್ದು, ರಸ್ತೆಗಳು ನದಿಗಳಂತೆ ಗೋಚರಿಸುತ್ತಿವೆ. ಪ್ರವಾಹದಲ್ಲಿ ಸಾವಿರಾರು ವಾಹನಗಳು ಕೊಚ್ಚಿ ಹೋಗಿವೆ.
ಇಡಾ ಚಂಡಮಾರುತ ಅಪ್ಪಳಿಸಿ ಹೋದ ನಂತರ ಭಾರೀ ಪ್ರಮಾಣದ ಮಳೆಯಾಗಿದ್ದು, ನ್ಯೂಜೆರ್ಸಿ, ಲೂಸಿಯಾನ, ನ್ಯೂಯಾರ್ಕ್ ಮೊದಲಾದ ರಾಜ್ಯಗಳು ತತ್ತರಿಸಿ ಹೋಗಿವೆ.
ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ತುರ್ತು ಪರಿಸ್ಥಿತಿ ಘೋಷಿಸಿ ಮುನ್ನೆಚ್ಚರಿಕೆ ಹಾಗೂ ತುರ್ತು ಪರಿಹಾತ ಕ್ರಮಗಳನ್ನು ತೆಗೆದುಕೊಂಡಿವೆ. ಭಾರೀ ಮಳೆಯ ಪರಿಣಾಮ ನ್ಯೂಯಾರ್ಕ್ ಸಿಟಿ ಹಾಗೂ ನ್ಯೂಜೆರ್ಸಿಯ ಸಾರ್ವಜನಿಕ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.