ಕಾಬೂಲ್ , ಸೆ 3 (DaijiworldNews/MS): ಅಫ್ಗಾನಿಸ್ತಾನದಲ್ಲಿಇರಾನ್ ನಾಯಕತ್ವದ ಮಾದರಿಯಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ತಾಲಿಬಾನ್ ಸಜ್ಜಾಗಿದೆ. ಸರ್ಕಾರ ರಚನೆಯ ಸಿದ್ಧತೆಯು ಬಹುತೇಕ ಪೂರ್ಣಗೊಂಡಿದ್ದು, ತಾಲಿಬಾನ್ ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾ ಸಮಂಗಾನಿ, "ಹೊಸ ಸರ್ಕಾರ ರಚನೆಯ ಮಾತುಕತೆಗಳು ಬಹುತೇಕ ಅಂತಿಮ ಹಂತದಲ್ಲಿದೆ ಮತ್ತು ಕ್ಯಾಬಿನೆಟ್ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ತಾಲಿಬಾನ್ನ ಅತಿದೊಡ್ಡ ನಾಯಕನಾದ , 60 ವರ್ಷದ ಮುಲ್ಲಾ ಹೆಬತುಲ್ಲಾ ಅಖುಂಡಜಾದನನ್ನು ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿದ್ದಾರೆ. ಹೈಬತ್ಉಲ್ಲಾ ಕೈಕೆಳಗೆ ಮೌಲವಿ ಯಾಕೂಬ್ (ತಾಲಿಬಾನ್ನ ಸ್ಥಾಪಕ ಮುಲ್ಲಾ ಒಮರ್ನ ಮಗ), ಸಿರಾಜುದ್ದೀನ್ ಹಖ್ಖಾನಿ (ಪ್ರಭಾವಿ ಹಖ್ಖಾನಿ ಗುಂಪಿನ ನಾಯಕ) ಮತ್ತು ಅಬ್ದುಲ್ ಘನಿ ಬರದರ್ (ತಾಲಿಬಾನ್ನ ಸ್ಥಾಪಕ ಸದಸ್ಯ) ಹೀಗೆ ಮೂವರು ನಾಯಕರು ಇರಲಿದ್ಧಾರೆ.
ಇರಾನ್ ಮಾದರಿ?
ಸರ್ವೋಚ್ಚ ನಾಯಕನೇ ದೇಶದ ರಾಜಕೀಯ ಹಾಗೂ ಧಾರ್ಮಿಕ ಅತ್ಯುನ್ನತ ನಾಯಕನಾಗಿರುತ್ತಾನೆ. ರಾಜಕೀಯ, ಧಾರ್ಮಿಕ, ಸೇನೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲಿ ಸರ್ವೋಚ್ಚ ನಾಯಕನ ಮಾತೇ ಅಂತಿಮವಾಗಿರುತ್ತದೆ.
ತಾಲಿಬಾನ್ ಈಗಾಗಲೇ ಪ್ರಾಂತ್ಯಗಳು ಮತ್ತು ಜಿಲ್ಲೆಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು ಮತ್ತು ಪೊಲೀಸ್ ಕಮಾಂಡರ್ಗಳನ್ನು ನೇಮಿಸಿದೆ. ಹೊಸ ಆಡಳಿತ ವ್ಯವಸ್ಥೆಯ ಹೆಸರು, ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆ ಇನ್ನೂ ನಿರ್ಧಾರವಾಗಿಲ್ಲ.
ಸರ್ವೋಚ್ಚ ನಾಯಕನೆಂದು ಹೇಳಲ್ಪಟ್ಟ ಮುಲ್ಲಾ ಹೆಬತುಲ್ಲಾ ಅಖುಂಡಜಾದ ಕಳೆದ 15 ವರ್ಷಗಳಿಂದ ಬಲೂಚಿಸ್ತಾನ ಪ್ರಾಂತ್ಯದ ಕಚ್ಲಾಕ್ ಪ್ರದೇಶದ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.