ಪಾಕಿಸ್ತಾನ, ಸೆ. 05 (DaijiworldNews/PY): "ನೈರುತ್ಯ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅರೆಸೇನಾಪಡೆಯ ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಅಫ್ಗಾನಿಸ್ತಾನ ಗಡಿಯ ಬಳಿಯಿರುವ ನಗರದ ಮಿಯಾನ್ ಗುಂಡಿಯಲ್ಲಿ ಮೋಟಾರ್ ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜರ್ ಅಕ್ರಮ್ ಹೇಳಿದ್ದಾರೆ.
"ಆತ್ಮಾಹುತಿ ಬಾಂಬರ್ ತನ್ನ ಬೈಕ್ನ್ನ ಚೆಕ್ ಪೋಸ್ಟ್ನಲ್ಲಿರುವ ಕಾನೂನು ಜಾರಿ ಏಜೆನ್ಸಿಯ ವಾಹನಕ್ಕೆ ನುಗ್ಗಿಸಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ದಾಳಿಯ ಹೊಣೆ ಹೊತ್ತುಕೊಂಡಿದೆ.
ಈ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದು, "ಕ್ವೆಟ್ಟಾದ ಮಸ್ತುಂಗ್ ರಸ್ತೆಯ ಎಫ್ಸಿ ಚೆಕ್ ಪೋಸ್ಟ್ ಮೇಲೆ ಟಿಟಿಪಿ ಆತ್ಮಾಹುತಿ ದಾಳಿಯನ್ನು ನಾನು ಖಂಡಿಸುತ್ತೇನೆ. ಹುತಾತ್ಮರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.