ಕೈರೊ, ಸೆ. 06 (DaijiworldNews/PY): ತಂದೆಯ ಅಡಳಿತ ವಿರುದ್ದ ದಂಗೆ ಎದ್ದ ಅರೋಪದ ಮೇಲೆ ಏಳು ವರ್ಷಗಳ ಹಿಂದೆ ನೈಜೀರಿಯಾದಿಂದ ಗಡಿಪಾರಾಗಿ, ಟ್ರಿಪೋಲಿಯಲ್ಲಿ ಬಂಧಿಸಲ್ಪಟ್ಟ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಪುತ್ರ ಅಲ್-ಸಾದಿ ಗಡಾಫಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ನಿಯೋಜಿತ ಪ್ರಧಾನಿ ಅಬ್ದುಲ್ ಹಮೀದ್, "ಅಲ್-ಸಾದಿ ಗಡಾಪಿಯನ್ನು ನ್ಯಾಯಾಲಯದ ಆದೇಶದ ಅನುಸಾರ ಬಿಡುಗಡೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
"ರಾಜಧಾನಿ ಟ್ರಿಪೊಲಿಯ ಅಲ್-ಹದಬ ಜೈಲಿನಿಂದ ಅಲ್-ಸಾದಿ ಗಡಾಫಿಯನ್ನು ಬಿಡುಗಡೆ ಮಾಡಲಾಗಿದೆ. 2011ರ ದಂಗೆಯ ಸಂದರ್ಭ ಬಂಧಿಸಲ್ಪಟ್ಟಿರುವ ಗಡಾಫಿ ಆಡಳಿತದ ಅನೇಕ ಅಧಿಕಾರಿಗಳು ಇನ್ನೂ ಜೈಲಿನಲ್ಲಿದ್ದಾರೆ" ಎಂದು ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವಕ್ತಾರ ಮೊಹಮ್ಮದ್ ಹಮೌದಾ ಮಾಹಿತಿ ನೀಡಿದ್ದಾರೆ.
ತನ್ನ ತಂದೆಯ ಆಡಳಿತದ ವಿರುದ್ಧದ ದಂಗೆಯ ಆರೋಪದ ಮೇಲೆ ಆಲ್-ಸಾದಿ ಗಡಾಫಿಯನ್ನು ಬಂಧಿಸಲಾಗಿತ್ತು. ಈ ಆರೋಪದಿಂದ ಮುಕ್ತಗೊಳಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಿಡುಗಡೆಗೊಂಡ ಬಳಿಕ ಸಾದಿ ಗಡಾಫಿ ಅವರು ಟರ್ಕಿಗೆ ಪ್ರಯಾಣಿಸಿದರು ಎಂದು ವರದಿ ತಿಳಿಸಿದೆ.