ಕಾಬೂಲ್, ಸೆ 07 (DaijiworldNews/MS): ಒಂದೆಡೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಮುಂದಾಗಿದೆ. ಇನ್ನೊಂದೆಡೆ ಕಬೂಲ್ ನಲ್ಲಿ ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದಿದ್ದಾರೆ. ಪಾಕಿಸ್ಥಾನ ಮತ್ತು ಐಎಸ್ಐ ವಿರುದ್ಧ ಘೋಷಣೆ ಕೂಗುತ್ತಾ ಮಹಿಳೆಯರು ಕಾಬೂಲ್ ನಲ್ಲಿ ರ್ಯಾಲಿ ನಡೆಸಿದ್ದಾರೆ.
ಮಂಗಳವಾರ ನೂರಾರು ಆಫ್ಘನ್ನರು, ಅದರಲ್ಲೂ ಹೆಚ್ಚಾಗಿ ಮಹಿಳೆಯರು ಕಾಬೂಲ್ ನಲ್ಲಿ ಬೀದಿಗಿಳಿದರು, ಪಾಕ್ ಮತ್ತು ಐಎಸ್ಐ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ತಾಲಿಬಾನ್ ರಾಲಿ ಮೇಲೆ ಗುಂಡಿನ ದಾಳಿ ನಡೆಸಿತು.
ಪ್ರತಿಭಟನಾಕಾರರು ಕಾಬೂಲ್ ನ ಸೆರೆನಾ ಹೋಟೆಲ್ ನತ್ತ ದೌಡಾಯಿಸುತ್ತಿದ್ದರು. ಆ ಹೋಟೆಲ್ ನಲ್ಲಿ ಕಳೆದ ಒಂದು ವಾರದಿಂದ ಪಾಕಿಸ್ಥಾನದ ಐಎಸ್ ಐ ನಿರ್ದೇಶಕ ಉಳಿದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ಅತ್ತ ಹೋಗುತ್ತಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೂರಾರು ಅಫ್ಘಾನ್ ಪುರುಷರು ಮತ್ತು ಮಹಿಳೆಯರು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೋಗಳನ್ನು ಸ್ಥಳೀಯ ಮಾಧ್ಯಮಗಳು ಹಂಚಿಕೊಂಡಿವೆ. ಪಾಕಿಸ್ತಾನಕ್ಕೆ ಸಾವಾಗಲಿ, ಐಎಸ್'ಐಗೆ ಸಾವಾಗಲಿ, ಸ್ವಾತಂತ್ರ್ಯ, ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.