ವಾಷಿಂಗ್ಟನ್, ಸೆ. 08 (DaijiworldNews/PY): "ಪಾಕಿಸ್ತಾನ ಸೇರಿದಂತೆ ಇರಾನ್, ಚೀನಾ ಹಾಗೂ ರಷ್ಯಾ ತಾಲಿಬಾನ್ನೊಂದಿಗಿನ ಮುಂದಿನ ನಡೆಯ ಕುರಿತು ಇದೀಗ ತಲೆಕೆಡಿಸಿಕೊಂಡಿವೆ" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ತಿಳಿಸಿದ್ದಾರೆ.
ತಾಲಿಬಾನ್ ತನ್ನ ಹೊಸ ಸರ್ಕಾರ ರಚನೆಯ ವಿವರವನ್ನು ಪ್ರಕಟಿಸಿದ ಬೆನ್ನಲ್ಲೇ ಜೋ ಬಿಡೆನ್ ಈ ಪ್ರತಿಕ್ರಿಯೆ ನೀಡಿದ್ದು, "ತಾಲಿಬಾನ್ ಜೊತೆ ಚೀನಾ ಪ್ರಮುಖ ಸಮಸ್ಯೆ ಎದುರಾಗಲಿದೆ. ಇನ್ನು ಪಾಕಿಸ್ತಾನ, ಇರಾನ್ ಹಾಗೂ ರಷ್ಯಾ ಅದೇ ಹಾದಿಯಲ್ಲಿದೆ" ಎಂದಿದ್ದಾರೆ.
"ಅವರೆಲ್ಲರೂ ಮುಂದೆ ಏನು ಮಾಡುವುದೆಂದು ಯೋಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಕಾದು ನೋಡೋಣ. ಮುಂದಿನದು ಆಸಕ್ತಿದಾಯಕವಾಗಿದೆ" ಎಂದು ಹೇಳಿದ್ದಾರೆ.
"ಅಫ್ಘಾನಿಸ್ತಾನದಲ್ಲಿ ನೂತನವಾಗಿ ತಾಲಿಬಾನ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ನೇತೃತ್ವದಲ್ಲಿ ನೂತನ ಸರಕಾರ ರಚನೆಯಾಗಿದೆ" ಎಂದು ತಾಲಿಬಾನ್ ಘೋಷಣೆ ಮಾಡಿದೆ.
"ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ" ಎಂದು ಘೋಷಣೆ ಮಾಡಲಾಗಿದೆ.
"ತಾಲಿಬಾನ್ ಸಂಸ್ಥಾಪಕ ಮತ್ತು ದಿವಂಗತ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಯಾಕೂಬ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ. ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಲಾಗಿದೆ" ಎಂದು ಮುಜಾಹಿದ್ ಹೇಳಿದ್ದಾರೆ.