ಕಬೂಲ್ , ಸೆ 09(DaijiworldNews/MS): ಅಫ್ಘಾನಿಸ್ತಾನದ ಮಹಿಳೆಯರು ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವಂತಿಲ್ಲ. ಏಕೆಂದರೆ ಕ್ರೀಡಾ ಚಟುವಟಿಕೆಗಳು ಮಹಿಳೆಯರ ದೇಹವನ್ನು ಬಹಿರಂಗಪಡಿಸುತ್ತದೆ ಎಂದು ತಾಲಿಬಾನ್ ಸೆ. 8 ರ ಬುಧವಾರ ಹೇಳಿದೆ. ಕಳೆದ ವಾರವಷ್ಟೇ ಸಹಶಿಕ್ಷಣ ನಿಷೇಧಿಸಿತ್ತು ಹಾಗೂ ಮಹಿಳಾ ಶಿಕ್ಷಕಿಯರು ಮಾತ್ರ ವಿದ್ಯಾರ್ಥಿನಿಯರಿಗೆ ಭೋಧಿಸಬಹುದು, ಅದು ಸಾಧ್ಯವಾಗದಿದ್ದರೆ ಒಳ್ಳೆಯ ವ್ಯಕ್ತಿತ್ವದ 'ವೃದ್ಧರು' ಮಾತ್ರ ಆ ಸ್ಥಾನ ತುಂಬಬಹುದು ಎಂದು ಹೇಳಿತ್ತು.
"ಮಹಿಳೆಯರು ಕ್ರಿಕೆಟ್ ಆಡುವುದು ಅನಿವಾರ್ಯವಲ್ಲದ ಕಾರಣ ಮಹಿಳೆಯರಿಗೆ ಕ್ರಿಕೆಟ್ ಆಡಲು ಅವಕಾಶ ನೀಡಲಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಕ್ರಿಕೆಟ್ ನಲ್ಲಿ, ಅವರು ತಮ್ಮ ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಮಹಿಳೆಯರನ್ನು ಈ ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ. ಮಾತ್ರವಲ್ಲದೇ ಈಗ ಮಾಧ್ಯಮ ಯುಗವಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿದ ಮಹಿಳೆಯ ಫೋಟೋಗಳು ಮತ್ತು ವೀಡಿಯೊಗಳು ಇರುತ್ತವೆ, ಮತ್ತು ನಂತರ ಜನರು ಅದನ್ನು ವೀಕ್ಷಿಸುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರು ಬಹಿರಂಗಪಡಿಸುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ ಎಂದು ಎಸ್ಬಿಎಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ನ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದರು.
ನವೆಂಬರ್ 2020 ರಲ್ಲಿ, ಇಪ್ಪತ್ತೈದು ಮಹಿಳಾ ಕ್ರಿಕೆಟಿಗರಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಕೇಂದ್ರ ಒಪ್ಪಿಗೆ ನೀಡಿತ್ತು. ಇದು ಕಾಬೂಲ್ನಲ್ಲಿ 40 ಮಹಿಳಾ ಕ್ರಿಕೆಟಿಗರಿಗೆ 21 ದಿನಗಳ ತರಬೇತಿ ಶಿಬಿರವನ್ನು ನಡೆಸಿತು. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ತನ್ನ ಎಲ್ಲ 12 ಸದಸ್ಯರನ್ನು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿರಬೇಕು ಮತ್ತು ಐಸಿಸಿಯ ಪೂರ್ಣ ಸದಸ್ಯರಿಗೆ ಮಾತ್ರ ಟೆಸ್ಟ್ ಪಂದ್ಯಗಳನ್ನು ಆಡಲು ಅನುಮತಿ ಇದೆ.