ಕಾಬೂಲ್, ಸ.09 (DaijiworldNews/HR): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಚೀನಾ ಸರ್ಕಾರವು 230 ಕೋಟಿ ರೂ. ನೆರವು ಘೋಷಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, "ಅಫ್ಘಾನಿಸ್ತಾನಕ್ಕೆ ಚೀನಾ ಸರ್ಕಾರವು 31 ಮಿಲಿಯನ್ ಡಾಲರ್ (ಸುಮಾರು 228 ಕೋಟಿ ರೂ.) ಮೌಲ್ಯದ ಪೂರೈಕೆಯನ್ನು ಒದಗಿಸುವುದಾಗಿ ಹೇಳಿದ್ದು, ಇದರಲ್ಲಿ ಆಹಾರ ಧಾನ್ಯಗಳು, ಲಸಿಕೆ ದಾಸ್ತಾನು ಮತ್ತು ಔಷಧಿಗಳು ಸೇರಿವೆ" ಎಂದಿದ್ದಾರೆ.
ಇನ್ನು ಜುಲೈನಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರಗಳೊಂದಿಗೆ ಸ್ಥಾಪಿಸಲಾದ ತುರ್ತು ಮೀಸಲು ಅಡಿಯಲ್ಲಿ ಸಂಘರ್ಷಪೀಡಿತ ದೇಶಕ್ಕೆ ಹೆಚ್ಚುವರಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಚೀನಾ ಸಿದ್ಧವಿದೆ ಎಂದು ವಾಂಗ್ ಹೇಳಿದ್ದಾರೆ.