ಕಾಬೂಲ್, ಸ.09 (DaijiworldNews/HR): ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ್ದ ಇಬ್ಬರು ಅಫ್ಗನ್ ಪತ್ರಕರ್ತರನ್ನು ತಾಲಿಬಾನಿಗಳು ಹಿಗ್ಗಾಮುಗ್ಗ ಥಳಿಸಿ, ಗಂಟೆಗಟ್ಟಲೆ ಬಂಧನದಲ್ಲಿಟ್ಟು ನಂತರ ಬಿಡುಗಡೆ ಮಾಡಿದ್ದಾರೆ.
ಉದ್ಯೋಗ ಮತ್ತು ಶಿಕ್ಷಣದ ಹಕ್ಕಿಗಾಗಿ ಮಹಿಳೆಯರು ಕಾಬೂಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದು, ಪತ್ರಕರ್ತ ನಖ್ದಿ ಮತ್ತು ಸಹೋದ್ಯೋಗಿ ಟಾಕಿ ದಾರ್ಯಾಬಿ ಇಬ್ಬರು ಪತ್ರಕರ್ತರು ಪ್ರತಿಭಟನೆಯ ವರದಿ ಮಾಡಲು ಅಲ್ಲಿಗೆ ತೆರಳಿದ್ದರು.
ಇನ್ನು ತಾಲಿಬಾನಿಗಳು ಬುಧವಾರ ಪ್ರತಿಭಟನಾ ಸ್ಥಳದಿಂದ ಈ ಇಬ್ಬರು ಪತ್ರಕರ್ತರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಲಾಠಿ ಮತ್ತು ವಿದ್ಯುತ್ ಕೇಬಲ್ ಹಾಗೂ ಚಾವಟಿಯಿಂದ ಹೊಡೆದರು ಎಂದು ಪತ್ರಕರ್ತರು ಹೇಳಿದರು.
"ಒಬ್ಬರು ನನ್ನ ತಲೆಯ ಮೇಲೆ ಕಾಲಿಟ್ಟರು. ಸಿಮೆಂಟ್ ಕಾಂಕ್ರೀಟ್ನಿಂದ ನನ್ನ ಮುಖಕ್ಕೆ, ತಲೆಗೆ ಹೊಡೆದರು. ಕಾಂಕ್ರಿಟ್ ಪುಡಿ ಪುಡಿಯಾಯಿತು. ಅವರು ನನ್ನನ್ನು ಕೊಲ್ಲುತ್ತಾರೆ ಎಂದು ಭಾವಿಸಿದ್ದೆ" ಎಂದು ಹಲ್ಲೆಗೊಳಗಾದ ನಖ್ದಿ ತಿಳಿಸಿರುವುದಾಗಿ ವರದಿಯಾಗಿದೆ.